ಮುಂಬೈ:ಟೀಂ ಇಂಡಿಯಾ ಆಟಗಾರರಾದ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಅವರ ತಂದೆ ಹಿಮಾಂಶು ಪಾಂಡ್ಯ ನಿಧನರಾಗಿದ್ದು, ಪಾಂಡ್ಯ ಸಹೋದರರಿಗೆ ಭಾರತ ಕ್ರಿಕೆಟ್ ದಿಗ್ಗಜರು ಧೈರ್ಯ ತುಂಬಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, "ಪಾಂಡ್ಯ ಸಹೋದರರ ತಂದೆಯ ಸಾವಿನ ಸುದ್ದಿ ಕೇಳಿ ಹೃದಯ ಒಡೆದಿದೆ. ಅವರೊಂದಿಗೆ ನಾನು ಕೆಲವು ಬಾರಿ ಮಾತನಾಡಿದ್ದೇನೆ. ಅವರು ಎಂದಿಗೂ ಉತ್ಸಾಹದಿಂದ ಇರುತ್ತಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ನೀವಿಬ್ಬರೂ ಧೈರ್ಯದಿಂದಿರಿ" ಎಂದಿದ್ದಾರೆ.
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಕೂಡ ಟ್ವೀಟ್ ಮಾಡಿದ್ದು,"ನಿಮ್ಮ ತಂದೆಯ ನಿಧನದ ಬಗ್ಗೆ ಕೇಳಿ ದುಖಃವಾಗಿದೆ. ಈ ಕಷ್ಟದ ಸಮಯದಲ್ಲಿ ದೇವರು ನಿಮಗೆ ಶಕ್ತಿ ನೀಡಲಿ" ಎಂದು ಸಂತಾಪ ಸೂಚಿಸಿದ್ದಾರೆ.
ಅಲ್ಲದೆ ಯುವರಾಜ್ ಸಿಂಗ್, ಯೂಸುಫ್ ಪಠಾಣ್, ಕಮೆಂಟೇಟರ್ ಹರ್ಷ ಭೋಗ್ಲೆ ಸೇರಿದಂತೆ ಹಲವು ಮಂದಿ ಹಿಮಾಂಶು ಪಾಂಡ್ಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಬರೋಡ ತಂಡದ ನಾಯಕ ಕೃನಾಲ್ ಪಾಂಡ್ಯ ತಮ್ಮ ಕುಟುಂಬದೊಂದಿಗೆ ಇರಲು ಬಯೋ ಬಬಲ್ ತೊರೆದಿದ್ದಾರೆ. ಹೀಗಾಗಿ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಬರೋಡಾ ಪರ ಕಣಕ್ಕಿಳಿಯುವುದಿಲ್ಲ ಎಂದು ಬರೋಡಾ ಕ್ರಿಕೆಟ್ ಅಸೋಸಿಯೇಷನ್ ತಿಳಿಸಿದೆ.