ಚೆನ್ನೈ:ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ 2021ರ ಮೊದಲ ಐಪಿಎಲ್ ಪಂದ್ಯದಲ್ಲೇ ಮಹತ್ವದ ಮೈಲುಗಲ್ಲನ್ನು ಸೃಷ್ಟಿಸಿದ್ದಾರೆ. ನಿನ್ನೆಯ ಪಂದ್ಯದಲ್ಲಿ ನಾಯಕನಾಗಿ ಚುಟುಕು ಕ್ರಿಕೆಟ್ನಲ್ಲಿ 6000 ರನ್ ಪೂರೈಸಿದ ಮೊದಲ ನಾಯಕ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.
ಶುಕ್ರವಾರ ನಡೆದ ಮುಂಬೈ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 29 ಎಸೆತಗಳಲ್ಲಿ 33 ರನ್ ಗಳಿಸಿದ್ದರು. ಈ ಮೂಲಕ ಟಿ-20 ಕ್ರಿಕೆಟ್ನಲ್ಲಿ ನಾಯಕನಾಗಿ 6 ಸಾವಿರ ರನ್ ಮೈಲುಗಲ್ಲನ್ನು ದಾಟಿದ ಮೊದಲ ಬ್ಯಾಟ್ಸ್ಮನ್ ಆಗಿದ್ದಾರೆ.
ಈ ದಾಖಲೆಯನ್ನು ನಿರ್ಮಿಸಲು ಕೊಹ್ಲಿ 169 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ. ಆರ್ಸಿಬಿ ನಾಯಕ ಪ್ರಸ್ತುತ 2ನೇ ಸ್ಥಾನದಲ್ಲಿರುವ ಸಿಎಸ್ಕೆ ನಾಯಕ ಎಂಎಸ್ ಧೋನಿಗಿಂತ 128 ರನ್ ಮುಂದಿದ್ದಾರೆ. ಧೋನಿ 252 ಇನ್ನಿಂಗ್ಸ್ಗಳಿಂದ 5872 ರನ್ ಬಾರಿಸಿದ್ದಾರೆ.
3ನೇ ಸ್ಥಾನದಲ್ಲಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಜಿ ನಾಯಕ ಗೌತಮ್ ಗಂಭೀರ್ 166 ಇನ್ನಿಂಗ್ಸ್ಗಳಿಂದ 4242 ರನ್ ಗಳಿಸಿದ್ದಾರೆ. ಆಸ್ಟ್ರೇಲಿಯಾದ ಆ್ಯರೋನ್ ಫಿಂಚ್ 126 ಇನ್ನಿಂಗ್ಸ್ಗಳಿಂದ 4051 ರನ್, 5 ಬಾರಿ ಐಪಿಎಲ್ ಟ್ರೋಫಿ ಗೆದ್ದಿರುವ ಮುಂಬೈ ನಾಯಕ ರೋಹಿತ್ ಶರ್ಮಾ 140 ಇನ್ನಿಂಗ್ಸ್ಗಳಿಂದ 3929 ರನ್ ಗಳಿಸುವ ಮೂಲಕ ಟಿ-20 ಕ್ರಿಕೆಟ್ನಲ್ಲಿ ಗರಿಷ್ಠ ರನ್ ಬಾರಿಸಿದ ಪಟ್ಟಿಯಲ್ಲಿ ಮೊದಲ 5 ಸ್ಥಾನದಲ್ಲಿದ್ದಾರೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ 159 ರನ್ ಗಳಿಸಿತ್ತು. ಎಬಿಡಿ(48), ಕೊಹ್ಲಿ(33) ಮತ್ತು ಮ್ಯಾಕ್ಸ್ವೆಲ್(39) ಬ್ಯಾಟಿಂಗ್ ನೆರವಿನಿಂದ ಆರ್ಸಿಬಿ ಕೊನೆಯ ಎಸೆತದಲ್ಲಿ ಒಂದು ರನ್ ತೆಗದುಕೊಂಡು 160 ರನ್ಗಳ ಗುರಿಯನ್ನು ಬೆನ್ನಟ್ಟಿ 2 ವಿಕೆಟ್ಗಳ ರೋಚಕ ಜಯ ಸಾಧಿಸಿ ಶುಭಾರಂಭ ಮಾಡಿದೆ.
ಇದನ್ನು ಓದಿ: 'ಡಿವಿಲಿಯರ್ಸ್ ಒಬ್ಬನೇ RCBಯ ಚಾಣಾಕ್ಷ ಆಟಗಾರ'... ಗೆಳೆಯನ ಗುಣಗಾನ ಮಾಡಿದ ಕೊಹ್ಲಿ