ಮುಂಬೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಪತ್ನಿ ಹಾಗೂ ಬಾಲಿವುಡ್ ನಟಿ ಹಾಗೂ ನಿರ್ಮಾಪಕಿ ಅನುಷ್ಕಾ ಶರ್ಮಾ ಸೋಮವಾರ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.
ಭಾರತದ ಪ್ರಸಿದ್ಧ ದಂಪತಿಯಾಗಿರುವ ವಿರಾಟ್ ಮತ್ತು ಅನುಷ್ಕಾ ಜಾಹಿರಾತಿನಲ್ಲಿ ನಟಿಸಿ ಪರಿಚಿತಾರಾಗಿ, ಪರಿಚಯ ಪ್ರೇಮಕ್ಕೆ ತಿರುಗಿದ ನಂತರ ಕೆಲವು ವರ್ಷಗಳ ಪ್ರೀತಿಯಲ್ಲಿದ್ದು, ನಂತರ ಡಿಸೆಂಬರ್ 11, 2017ರಲ್ಲಿ ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿ ಭಾರತದಲ್ಲಿ ಅದ್ಧೂರಿಯಾಗಿ ಅರತಕ್ಷತೆ ನಡೆಸಿತ್ತು. ಪ್ರಧಾನಿ ಮೋದಿ, ಬಾಲಿವುಡ್ ದಿಗ್ಗಜರು ಮತ್ತು ಕ್ರಿಕೆಟ್ ತಾರೆಯರು ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕಳೆದ ಆಗಸ್ಟ್ 17 ರಂದು ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜನವರಿಯಲ್ಲಿ ತಾವೂ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಪೋಷಕರಾಗುತ್ತಿರುವ ಖುಷಿ ಸುದ್ದಿಯನ್ನು ಹಂಚಿಕೊಂಡಿದ್ದರು.
" ಇಂದು ಮಧ್ಯಾಹ್ನ ನಮಗೆ ಹೆಣ್ಣು ಮಗು ಜನಿಸಿದೆ ಎಂದು ಹೇಳಿಕೊಳ್ಳಲು ನಮಗೆ ಖುಷಿಯಾಗುತ್ತಿದೆ. ನಿಮ್ಮೆಲ್ಲರ ಪ್ರೀತಿ, ಶುಭಾಶಯ ಹಾಗೂ ಪ್ರಾರ್ಥನೆಗೆ ಧನ್ಯವಾದಗಳು. ಅನುಷ್ಕಾ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ. ನಾವು ಹೊಸ ಜೀವನವನ್ನು ಆರಂಭಿಸಲಿದ್ದೇವೆ ಎಂದು ಭಾವಿಸುತ್ತಿದ್ದೇನೆ. ನಮ್ಮ ಖಾಸಗಿತನವನ್ನು ನೀವೆಲ್ಲರೂ ಗೌರವಿಸುತ್ತೀರಿ ಎಂದು ನಾನು ಭಾವಿಸುತ್ತೇನೆ" ಎಂದು ವಿರಾಟ್ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
ವಿರಾಟ್ ಈ ಟ್ವೀಟ್ ಮಾಡುತ್ತಿದ್ದಂತೆ ಲಕ್ಷಾಂತರ ಅಭಿಮಾನಿಗಳು ಟೀಮ್ ಇಂಡಿಯಾ ನಾಯಕ ಹಾಗೂ ಬಾಲಿವುಡ್ ನಟಿಗೆ ಶುಭಕೋರಿದ್ದಾರೆ.