ವೆಲ್ಲಿಂಗ್ಟನ್: ಶುಕ್ರವಾರದಿಂದ ನ್ಯೂಜಿಲ್ಯಾಂಡ್ ವಿರುದ್ಧ ಆರಂಭಗೊಳ್ಳಲಿರುವ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಭಾಗಿಯಾಗಲಿದ್ದು, ಅದಕ್ಕಾಗಿ ಉಭಯ ತಂಡಗಳು ಈಗಾಗಲೇ ಭರದ ಸಿದ್ಧತೆ ನಡೆಸಿವೆ.
ಇದರ ಮಧ್ಯೆ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ವೆಲ್ಲಿಂಗ್ಟನ್ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಗೆ ಭೇಟಿ ನೀಡಿತು. ಈ ವೇಳೆ ಮಾತನಾಡಿದ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಉಭಯ ದೇಶಗಳ ನಡುವಿನ ಸಂಬಂಧದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರತಿವೊಂದು ತಂಡವು ಭಾರತವನ್ನು ಟೆಸ್ಟ್ನಲ್ಲಿ ಸೋಲಿಸಲು ಬಯಸುತ್ತದೆ. ಅದೇ ರೀತಿ ನ್ಯೂಜಿಲ್ಯಾಂಡ್ ಕೂಡ ಪ್ಲಾನ್ ಮಾಡಿಕೊಂಡು ಎದುರು ನೋಡುತ್ತಿದೆ. ಪ್ರತಿಯೊಂದು ತಂಡವು ನಮ್ಮನ್ನು ಸೋಲಿಸಲು ಬಯಸುವ ಹಂತಕ್ಕೆ ಈಗಾಗಲೇ ನಾವು ತಲುಪಿದ್ದು, ಕಳೆದ ಮೂರು-ನಾಲ್ಕು ವರ್ಷಗಳಿಂದ ನಮ್ಮ ತಂಡ ಟೆಸ್ಟ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಐಸಿಸಿಯ ಎಲ್ಲಾ ಟೂರ್ನಿ ಪರಿಗಣಿಸಿದಾಗ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಶ್ರೇಷ್ಠವಾದುದು ಎಂದರು.
ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ನ ಪಾಯಿಂಟ್ ಪಟ್ಟಿಯಲ್ಲಿ ಭಾರತ ಅಗ್ರ ಸ್ಥಾನದಲ್ಲಿದ್ದು, ನ್ಯೂಜಿಲ್ಯಾಂಡ್ 6ನೇ ಸ್ಥಾನದಲ್ಲಿದೆ. ಉಭಯ ತಂಡಗಳು ಎರಡು ಟೆಸ್ಟ್ ಪಂದ್ಯಗಳಲ್ಲಿ ಸೆಣಸಾಟ ನಡೆಸಲಿವೆ.