ದುಬೈ:ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಸ್ಫೋಟಕ ಬ್ಯಾಟ್ಸ್ಮನ್ ಎಬಿಡಿ ವಿಲಿಯರ್ಸ್ ಸನ್ರೈಸರ್ಸ್ ವಿರುದ್ಧದ ಪಂದ್ಯದ ವೇಳೆ ಕೋವಿಡ್ 19 ವಿರುದ್ಧ ಹೋರಾಟ ನಡೆಸುತ್ತಿರುವವರ ಹೆಸರಿರುವ ಜರ್ಸಿ ತೊಟ್ಟು ಕಾಣಿಸಿಕೊಳ್ಳಲಿದ್ದಾರೆ.
ಸೋಮವಾರ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆರ್ಸಿಬಿ ಸನ್ರೈಸರ್ಸ್ ಹೈದರಾಬಾದ್ ತನ್ನ ಐಪಿಎಲ್ ಅಭಿಯಾನ ಆರಂಭಿಸಲಿದೆ. ಈ ವೇಳೆ ತಮ್ಮ ಹೆಸರಿನ ಜರ್ಸಿಯ ಬದಲು ಕೋವಿಡ್-19 ಹೀರೋಗಳ ಹೆಸರಿರುವ ಜರ್ಸಿ ತೊಟ್ಟು ಆಡಲಿದ್ದಾರೆ ಎಂದು ತಿಳಿದು ಬಂದಿದೆ. ಈ ವಿಚಾರವನ್ನು ಈ ಇಬ್ಬರು ಆಟಗಾರರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಎಬಿಡಿ ವಿಲಿಯರ್ಸ್ ಪಾರಿತೋಷ್ ಪಂತ್ ಎಂಬ ಹೆಸರಿರುವ ಹಾಗೂ ವಿರಾಟ್ ಕೊಹ್ಲಿ ಸಿಮ್ರಾನ್ಜೀತ್ ಸಿಂಗ್ ಎಂಬ ಕೋವಿಡ್ ಹೀರೋನ ಹೆಸರಿರುವ ಜರ್ಸಿ ತೊಡಲಿದ್ದಾರೆ. ಜೊತೆಗೆ ಈ ಜರ್ಸಿ ತೊಟ್ಟಿರುವ ಫೋಟೋವನ್ನೇ ಈ ಇಬ್ಬರು ತಮ್ಮ ಟ್ವಿಟರ್ನಲ್ಲಿ ಪ್ರೊಫೈಲ್ ಫೋಟೋ ಹಾಗೂ ಪ್ರೊಫೈಲ್ ಹೆಸರಾಗಿ ಕೂಡ ಬದಲಾಯಿಸಿಕೊಂಡು ಗೌರವ ಸೂಚಿಸಿದ್ದಾರೆ.
'ಪೂಜಾ ಅವರೊಂದಿಗೆ 'ಪ್ರಾಜೆಕ್ಟ್ ಫೀಡಿಂಗ್ ಫ್ರಮ್ ಫಾರ್' ಎಂಬ ಯೋಜನೆಯ ಮೂಲಕ ಲಾಕ್ಡೌನ್ ಸಮಯದಲ್ಲಿ ಸಾಕಷ್ಟು ನಿರ್ಗತಿಕರಿಗೆ ಆಹಾರವನ್ನು ಪೂರೈಸಿದ ಪಾರಿತೋಷ್ ಅವರಿಗೆ ವಂದಿಸುತ್ತೇನೆ. ನಾನು ಈ ಆವೃತ್ತಿಯಲ್ಲಿ ಅವರ ಹೆಸರಿರುವ ಜರ್ಸಿಯನ್ನು ಧರಿಸಿ ಆಡುವ ಮೂಲಕ ಅವರ ಸವಾಲಿನ ಮನೋಭಾವವನ್ನು ಪ್ರಶಂಸಿಸುತ್ತೇನೆ' ಎಂದು ಮಿಸ್ಟರ್ 360 ಖ್ಯಾತಿಯ ವಿಲಿಯರ್ಸ್ ಸಾಮಾಜಿಕ ಮಾಧ್ಯಮದ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.