ನವದೆಹಲಿ: ಆದಿತ್ಯ ತಾರೆ ಅವರ ಅಜೇಯ ಶತಕ ಮತ್ತು ನಾಯಕ ಪೃಥ್ವಿ ಶಾ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಫೈನಲ್ ಪಂದ್ಯದಲ್ಲಿ ಉತ್ತರ ಪ್ರದೇಶವನ್ನು 6 ವಿಕೆಟ್ಗಳಿಂದ ಬಗ್ಗುಬಡಿದ ಮುಂಬೈ 2021ರ ವಿಜಯ್ ಹಜಾರೆ ಟ್ರೋಫಿಯನ್ನು ಎತ್ತಿಹಿಡಿದಿದೆ.
ಭಾನುವಾರ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಉತ್ತರ ಪ್ರದೇಶ, 50 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 312 ರನ್ ಗಳಿಸಿತ್ತು. ಆರಂಭಿಕ ಬ್ಯಾಟ್ಸ್ಮನ್ ಮಾಧವ್ ಕೌಶಿಕ್ 156 ಎಸೆತಗಳಲ್ಲಿ 15 ಬೌಂಡರಿ ಮತ್ತು 4 ಸಿಕ್ಸರ್ ಸಹಿತ ಅಜೇಯ 158 ರನ್ ಗಳಿಸಿದರೆ, ಸಮರ್ಥ್ ಸಿಂಗ್ 56, ಅಕ್ಷದೀಪ್ ನಾಥ್ 55 ರನ್ ಗಳಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು.
ಮುಂಬೈ ಪರ ತನುಷ್ ಕೊಟಿಯನ್ 2 ವಿಕೆಟ್ ಹಾಗೂ ಪ್ರಶಾಂತ್ ಸೋಲಂಕಿ ಒಂದು ವಿಕೆಟ್ ಪಡೆದರು.
313 ರನ್ಗಳ ಗುರಿ ಪಡೆದ ಮುಂಬೈ ತಂಡಕ್ಕೆ ನಾಯಕ ಪೃಥ್ವಿ ಶಾ ಸ್ಫೋಟಕ ಆರಂಭ ಒದಗಿಸಿಕೊಟ್ಟರು. ಅವರು ಕೇವಲ 39 ಎಸೆತಗಳಲ್ಲಿ 10 ಬೌಂಡರಿ ಮತ್ತು 4 ಸಿಕ್ಸರ್ಗಳ ಸಹಿತ 73 ರನ್ ಗಳಿಸಿ ಮೊದಲ ವಿಕೆಟ್ಗೆ ಜೈಸ್ವಾಲ್(29) ಜೊತೆಗೆ ಕೇವಲ 9.1 ಓವರ್ಗಳಲ್ಲಿ 89 ರನ್ಗಳ ಜೊತೆಯಾಟದ ಕೊಡುಗೆ ನೀಡಿದರು.
ಇವರಿಬ್ಬರ ನಂತರ ಒಂದಾದ ಆದಿತ್ಯ ತಾರೆ ಮತ್ತು ಶಾಮ್ಸ್ ಮುಲಾನಿ 3ನೇ ವಿಕೆಟ್ಗೆ 88 ರನ್ಗಳ ಜೊತೆಯಾಟ ನೀಡಿ ತಂಡವನ್ನು ಗೆಲುವಿನ ಸನಿಹ ತಂದರು. 43 ಎಸೆತಗಳಲ್ಲಿ 2 ಸಿಕ್ಸರ್ ಸಹಿತ 36 ರನ್ ಗಳಿಸಿದ್ದ ಮುಲಾನಿ ಔಟಾದದರು. ನಂತರ ತಾರೆ ಜೊತೆಯಾದ ಶಿವಂ ದುಬೆ 4ನೇ ವಿಕೆಟ್ಗೆ 88 ರನ್ ಸೇರಿಸಿದರು. ಅವರು 28 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಸೇರಿದಂತೆ 42 ರನ್ ಗಳಿಸಿ ಗೆಲುವಿಗೆ ಕೇವಲ 10 ಅಗತ್ಯವಿದ್ದಾಗ ಔಟಾದರು.
ಆದರೆ ಜವಾಬ್ದಾರಿಯುವ ಬ್ಯಾಟಿಂಗ್ ನಡೆಸಿದ ತಾರೆ 107 ಎಸೆತಗಳಲ್ಲಿ 18 ಬೌಂಡರಿ ಸಹಿತ ಅಜೇಯ 118 ರನ್ ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.
ಮುಂಬೈ ತಂಡ 4ನೇ ಬಾರಿ ವಿಜಯ್ ಹಜಾರೆ ಟ್ರೋಫಿಯನ್ನು ಗೆಲ್ಲುವ ಮೂಲಕ ಅತಿ ಹೆಚ್ಚು ಬಾರಿ ಈ ಟೂರ್ನಿಯನ್ನು ಗೆದ್ದ 2ನೇ ತಂಡ ಎಂಬ ದಾಖಲೆಯನ್ನು ಕರ್ನಾಟಕದ ಜೊತೆ ಹಂಚಿಕೊಂಡಿದೆ. ತಮಿಳುನಾಡು ತಂಡ 5 ಬಾರಿ ಗೆಲ್ಲುವ ಮೂಲಕ ಅಗ್ರಸ್ಥಾನದಲ್ಲಿದೆ.