ಬೆಂಗಳೂರು: ಹಾಲಿ ವಿಜಯ ಹಜಾರೆ ಚಾಂಪಿಯನ್ ಮುಂಬೈ ತಂಡ ಶಿವಂ ದುಬೆಯ ಸ್ಫೋಟಕ ಶತಕದ ಹೊರತಾಗಿಯೂ ಕರ್ನಾಟಕ ತಂಡದ ಮುಂದೆ ಮಂಡಿಯೂರಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ 50 ಓವರ್ಗಳಲ್ಲಿ 312 ರನ್ಗಳಿಸಿತು. ಆರಂಭಿಕರಾಗಿ ಕಣಕ್ಕಿಳಿದ ರಾಹುಲ್ 58, ದೇವದತ್ ಪಡಿಕ್ಕಲ್ 79, ಮನೀಷ್ ಪಾಂಡೆ 62, ರೋಹನ್ ಕದಂ 32, ಶರತ್ ಬಿಆರ್ 28, ಕೆ ಗೌತಮ್ 22, ಹಾಗೂ ಮಿಥುನ್ 14 ರನ್ಗಳಿಸಿ 312 ರನ್ಗಳ ಬೃಹತ್ ಮೊತ್ತಕ್ಕೆ ಕಾರಣರಾದರು.
313 ರನ್ಗಳ ಕಠಿಣ ಗುರಿ ಬೆನ್ನತ್ತಿದ ಮುಂಬೈ ತಂಡ 48.1 ಓವರ್ಗಳಲ್ಲಿ ಆಲೌಟ್ ಆಗುವ ಮೂಲಕ ಕೇವಲ 9 ರನ್ಗಳಿಂದ ಸೋಲೊಪ್ಪಿಕೊಂಡಿತು.
ಕೇವಲ 58 ಎಸೆತಗಳಲ್ಲಿ ಶತಕ ಪೂರೈಸಿದ ಶಿವ ದುಬೆ 68 ಎಸೆತಗಳಲ್ಲಿ 10 ಸಿಕ್ಸರ್ ಹಾಗೂ 7 ಬೌಂಡರಿ ನೆರವಿನಿಂದ 118 ರನ್ಗಳಿಸಿ ಗೆಲುವಿಗಾಗಿ ಏಕಾಂಗಿ ಹೋರಾಟ ನಡೆಸಿ ವಿಫಲರಾದರು. ಪ್ರಮುಖ ಬ್ಯಾಟ್ಸ್ಮನ್ಗಳಾದ ಅಯ್ಯರ್ (11), ಸಿದ್ದಾರ್ಥ್ ಲಾಡ್(34), ಆದಿತ್ಯ ತರೆ(32), ಸೂರ್ಯಕುಮಾರ್ ಯಾದವ್(26) ರನ್ ಗಳಿಸಲು ವಿಫಲರಾಗಿದ್ದು ತಂಡದ ಸೋಲಿಗೆ ಕಾರಣವಾಯಿತು.
ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ ಮಿಥುನ್ 3 ವಿಕೆಟ್, ಕೆ ಗೌತಮ್3, ಪ್ರಸಿದ್ ಕೃಷ್ಣ 2, ರೋನಿತ್ ಹಾಗೂ ಶ್ರೇಯಸ್ ಗೋಪಾಲ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.