ಮುಂಬೈ:ಮಾರ್ಚ್ ತಿಂಗಳಲ್ಲಿ ನಡೆಯುವ ಐಸಿಸಿ ಸಭೆಯಲ್ಲಿ 4 ದಿನಗಳ ಟೆಸ್ಟ್ ಪ್ರಸ್ತಾಪವನ್ನು ತಾವು ಬೆಂಬಲಿಸುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.
ಮುಂಬೈನಲ್ಲಿ ನಡೆದ ಕ್ರಿಕೆಟ್ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ, ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಮತ್ತು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಪ್ರತಿನಿಧಿಗಳೊಂದಿಗೆ ನಡೆದ ಅನೌಪಚಾರಿಕ ಸಭೆಯಲ್ಲಿ ಬಿಸಿಸಿಐ 4 ದಿನಗಳ ಟೆಸ್ಟ್ ಕ್ರಿಕೆಟ್ಗೆ ತಮ್ಮ ಬೆಂಬಲವಿಲ್ಲ ಎಂದು ಹೇಳಿದೆ.
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಮಾಧ್ಯಮಗಳ ವರದಿಗಳ ಪ್ರಕಾರ, ಇಸಿಬಿ ಮತ್ತು ಸಿಎ ಪ್ರತಿನಿಧಿಗಳೊಂದಿಗಿನ ಸಭೆಯಲ್ಲಿ ಮಾಜಿ ಐಸಿಸಿ ಮತ್ತು ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ಕೂಡ ಹಾಜರಿದ್ದರು ಎಂದು ತಿಳಿದುಬಂದಿದೆ.
ಕಳೆದ ತಿಂಗಳು ಈ ರೀತಿಯ ಟೆಸ್ಟ್ ಬಗ್ಗೆ ಆಲೋಚನೆಯನ್ನು ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯ ಕಾರ್ಯನಿರ್ವಾಹಕ ಕೆವಿನ್ ರಾಬರ್ಟ್ಸ್ ಐಸಿಸಿ ಮುಂದೆ ತಂದಿದ್ದರು. ಆದರೆ ಇದಕ್ಕೆ ದಕ್ಷಿಣ ಆಫ್ರಿಕಾ ಹಾಗೂ ಇಂಂಗ್ಲೆಂಡ್ ಕ್ರಿಕೆಟ್ ಮಂಡಳಿಗಳು ಬೆಂಬಲ ನೀಡಿದ್ದವು. ಆದರೆ ಮಾಜಿ ಕ್ರಿಕೆಟಿಗರಾದ ಮೆಕ್ಗ್ರಾತ್, ವಾರ್ನ್, ಸಚಿನ್, ಸೆಹ್ವಾಗ್ ಹಾಗೂ ಭಾರತ ತಂಡದ ಹಾಲಿ ನಾಯಕ ಕೊಹ್ಲಿ ವಿರೋಧ ವ್ಯಕ್ತಪಡಿಸಿದ್ದರು.