ಚೆನ್ನೈ: ಇಂಗ್ಲೆಂಡ್ ತಂಡದ ರೊಟೇಶನ್ ನಿಯಮ ಚರ್ಚೆಗೆ ಗುರಿಯಾಗುತ್ತಿದ್ದರೂ ತಮ್ಮ ತಂಡದ ಆಟಗಾರರಿಗೆ ಐಪಿಎಲ್ನಲ್ಲಿ ಆಡಬೇಡಿ ಎಂದು ಹೇಳುವುದು ತುಂಬಾ ಕಷ್ಟದ ಕೆಲಸ ಎಂದು ಇಂಗ್ಲೆಂಡ್ ಕೋಚ್ ಕ್ರಿಸ್ ಸಿಲ್ವರ್‌ವುಡ್ ಬುಧವಾರ ಹೇಳಿದ್ದಾರೆ.
ಮೂರು ಮಾದರಿಯ ಕ್ರಿಕೆಟ್ ಆಡುವ ಆಟಗಾರರಾದ ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್, ಜಾನಿ ಬೈರ್ಸ್ಟೋವ್, ಮೋಯಿನ್ ಅಲಿ ಅಂತಹ ಆಟಗಾರರನ್ನು ಭಾರತ ಮತ್ತು ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ವೇಳೆ ರೊಟೇಶನ್ ಮಾಡಲಾಗಿದೆ. ಸ್ಟೋಕ್ಸ್, ಆರ್ಚರ್ ಇಂಗ್ಲೆಂಡ್ ಸರಣಿಯಿಂದ ಹೊರಗುಳಿದರೆ, ಬೈರ್ಸ್ಟೋವ್ ಮೊದಲೆರಡು ಟೆಸ್ಟ್ನಿಂದ ಹಾಗೂ ಮೋಯಿನ್ ಕೊನೆಯೆರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದರು.
" ನೀವು ಐಪಿಎಲ್ ಆಡಲು ಸಾಧ್ಯವಿಲ್ಲ ಎಂದು ಆಟಗಾರರಿಗೆ ಹೇಳುವುದು ತುಂಬಾ ಕಷ್ಟ. ಐಪಿಎಲ್ ಟಿ-20 ಜಗತ್ತಿನಲ್ಲಿ ಬಹುದೊಡ್ಡ ಕ್ರಿಕೆಟ್ ಟೂರ್ನಿಯಾಗಿದೆ. ಆದ್ದರಿಂದ ನೀವು ಆಡಬಾರದು ಎಂದು ಹೇಳುವುದು ತುಂಬಾ ಕಷ್ಟ" ಎಂದು ಸಿಲ್ವರ್‌ವುಡ್ 3ನೇ ಟೆಸ್ಟ್ಗೂ ಮುನ್ನ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದ್ದಾರೆ.