ನವದೆಹಲಿ :ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅತ್ಯಂತ ಯಶಸ್ವಿ ತಂಡವಾಗುವಲ್ಲಿ ಸಿಂಹಪಾಲನ್ನು ಪಡೆದಿದ್ದ ಸುರೇಶ್ ರೈನಾ ಇಂದಿನ ಪಂದ್ಯದಲ್ಲಿ ತಾವು ಇಲ್ಲವೆಂಬುದನ್ನು ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಜೊತೆಗೆ ತಮ್ಮ ತಂಡಕ್ಕೆ ಶುಭವಾಗಲಿ ಎಂದು ಹರಸಿದ್ದಾರೆ.
ವೈಯಕ್ತಿಕ ಕಾರಣದಿಂದ 13ನೇ ಆವೃತ್ತಿಯ ಐಪಿಎಲ್ನಿಂದ ಹೊರ ಬಂದಿರುವ ರೈನಾ, ಮುಂಬೈ ಇಂಡಿಯನ್ಸ್ ವಿರುದ್ಧ ಇಂದು ಆರಂಭವಾಗುತ್ತಿರುವ ಕದನದಲ್ಲಿ ತಾವು ಇರಲ್ಲ ಎಂಬುದನ್ನು ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
'ನಿಮಗೆಲ್ಲರಿಗೂ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ. ನಾನು ಈದಿನ ಅಲ್ಲಿ ಇಲ್ಲ ಎಂಬುದನ್ನು ಊಹೆ ಮಾಡಿಕೊಳ್ಳಲಾಗುತ್ತಿಲ್ಲ. ಆದರೆ, ನನ್ನ ಶುಭ ಹಾರೈಕೆ ನಿಮ್ಮ ಜೊತೆ ಇರುತ್ತದೆ. ನಿಮಗೆಲ್ಲಾ ನಾನು ನನ್ನ ಮನಸ್ಸಿನ ಕಂಪನಗಳನ್ನು ಕಳುಹಿಸುತ್ತಿದ್ದೇನೆ' ಎಂದು ಟ್ವೀಟ್ ಮೂಲಕ ಹಾರೈಸಿದ್ದಾರೆ.
ರೈನಾ ಅನುಪಸ್ಥಿತಿಯಿಂದ ಸಿಎಸ್ಕೆ ಕೇವಲ ಒಬ್ಬ ಅತ್ಯುತ್ತಮ ಆಟಗಾರನನ್ನು ಮಾತ್ರ ಕಳೆದುಕೊಂಡಿಲ್ಲ, ಜೊತೆಗೆ ತಂಡದಲ್ಲಿದ್ದ ಏಕೈಕ ಎಡಗೈ ಬ್ಯಾಟ್ಸ್ಮನ್ರನ್ನು ಮಿಸ್ ಮಾಡಿಕೊಳ್ಳುತ್ತಿದೆ. ಅದರಲ್ಲೂ ರೈನಾ ಮುಂಬೈ ಇಂಡಿಯನ್ಸ್ ವಿರುದ್ಧ ಹೆಚ್ಚು ರನ್ಗಳಿಸಿರುವ ಬ್ಯಾಟ್ಸ್ಮನ್ ಆಗಿದ್ದರು. ಅವರು 114ರ ಸ್ಟ್ರೈಕ್ ರೇಟ್ನಲ್ಲಿ 818 ರನ್ ಸಿಡಿಸಿದ್ದಾರೆ.