ಮ್ಯಾಂಚೆಸ್ಟರ್: ಏಕದಿನ ಕ್ರಿಕೆಟ್ನಲ್ಲಿ ನಂಬರ್ ಒನ್ ಆಗಿರುವ ಇಂಗ್ಲೆಂಡ್ ತಂಡಕ್ಕೆ ಶ್ರೇಯಾಂಕದಲ್ಲಿ 10 ನೇ ಸ್ಥಾನದಲ್ಲಿರುವ ಅಫ್ಘಾನಿಸ್ತಾನ ತಂಡ ಇಂದು ವಿಶ್ವಕಪ್ನ 24 ನೇ ಪಂದ್ಯದಲ್ಲಿ ಸವಾಲೊಡ್ಡಲು ಸಿದ್ದವಾಗಿದೆ.
ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿರುವ ಇಂಗ್ಲೆಂಡ್ ತಂಡಕ್ಕೆ ಕ್ರಿಕೆಟ್ ಶಿಶು ಪ್ರಬಲ ಎದುರಾಳಿಯಾಗದಿದ್ದರೂ, ಸ್ಪಿನ್ ಸ್ನೇಹಿ ಪಿಚ್ ಹೊಂದಿರುವ ಒಲ್ಡ್ ಟ್ರಾಫೋರ್ಡ್ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನವನ್ನು ಕಡೆಗಣಿಸುವಂತಿಲ್ಲ. ಏಕದಿನ ಕ್ರಿಕೆಟ್ ಬೌಲಿಂಗ್ ಶ್ರೇಯಾಂಕದಲ್ಲಿ 3ನೇ ಸ್ಥಾನದಲ್ಲಿರುವ ರಶೀದ್ ಖಾನ್,12 ನೇ ಸ್ಥಾನದಲ್ಲಿ ಮುಜೀಬ್ ಉರ್ ರಹಮಾನ್ ಹಾಗೂ ನಬಿ ಇಂಗ್ಲೆಂಡ್ ತಂಡವನ್ನು ಕಾಡಲು ತಯಾರಿದ್ದಾರೆ. ಆದರೆ, ವೇಗದ ಬೌಲಿಂಗ್ ತೀರಾ ಕಳಪೆಯಾಗಿರುವುದರಿಂದ ಇಂಗ್ಲೆಂಡ್ಗೆ ಧನಾತ್ಮಕ ಲಾಭವಾಗಲಿದೆ. ಬ್ಯಾಟಿಂಗ್ನಲ್ಲಿ ವಿಭಾಗದಲ್ಲಿ ನಜೀಬುಲ್ಲಾ, ನೂರ್ ಅಲಿ ಜಾಡ್ರನ್, ಶಾಹಿದಿ, ರಹಮತ್ ಶಾ ರಂತಹ ಅನುಭವಿಗಳಿದ್ದಾರೆ.
ಇಂಗ್ಲೆಂಡ್ ತಂಡಕ್ಕೆ ಜಾಸನ್ ರಾಯ್ ಅಲಭ್ಯತೆ ಹಿನ್ನಡೆಯಾಗಲಿದೆ. ಆದರೆ ಉತ್ತಮ ಫಾರ್ಮ್ನಲ್ಲಿರುವ ಜೋ ರೂಟ್, ಬೈರ್ಸ್ಟೋವ್ ಹಾಗೂ ಸ್ಟೋಕ್ಸ್ ಉತ್ತಮ ಫಾರ್ಮ್ನಲ್ಲಿದ್ದರೆ, ಬಟ್ಲರ್ ತಮ್ಮ ಫಿನಿಶಿಂಗ್ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವುದರಿಂದ ಇಂಗ್ಲೆಂಡ್ ಬ್ಯಾಟಿಂಗ್ ವಿಭಾಗದಲ್ಲಿ ಯಾವುದೇ ಸಮಸ್ಯೆ ಇಲ್ಲ. ಬೌಲಿಂಗ್ ವಿಭಾಗದಲ್ಲಿ ಜೋಫ್ರಾ ಆರ್ಚರ್, ಮಾರ್ಕ್ ವುಡ್, ವೋಕ್ಸ್ ರಂತಹ ಶ್ರೇಷ್ಠರಿಂದ ಕೂಡಿದ್ದು, ಅಫ್ಘನ್ನರ ವಿರುದ್ಧ ದಾಖಲೆಯ ಜಯಕ್ಕಾಗಿ ಇಂಗ್ಲೆಂಡ್ ಕಾದು ಕುಳಿತಿದೆ.
2019ರ ವಿಶ್ವಕಪ್ನಲ್ಲಿ ಸಾಧನೆ:
ಇಂಗ್ಲೆಂಡ್ 4 ಪಂದ್ಯಗಳನ್ನಾಡಿದ್ದು, 3 ಗೆಲುವು, 1 ಪಂದ್ಯದಲ್ಲಿ ಸೋಲುಕಂಡಿದ್ದು ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಅಫ್ಘಾನಿಸ್ತಾನ ಆಡಿರುವ 4 ಪಂದ್ಯಗಳಲ್ಲೂ ಸೋಲುಕಂಡಿದ್ದು ಕೊನೆಯ ಸ್ಥಾನದಲ್ಲಿದೆ.