ಪೋಚೆಫ್ಸ್ಟಾರ್ಮ್: ಅಂಡರ್ 19 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 172 ರನ್ಗಳಿಗೆ ಕಟ್ಟಿಹಾಕುವಲ್ಲಿ ಭಾರತ ತಂಡ ಯಶಸ್ವಿಯಾಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 43.1 ಓವರ್ಗಳಲ್ಲಿ 172 ರನ್ಗಳಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದೆ. ಆರಂಭಿಕನಾಗಿ ಕಣಕ್ಕಿಳಿದ ಮೊಹಮ್ಮದ್ ಜುರೈರಾ(4) ರನ್ನು ಸುಶಾಂತ್ ಮಿಶ್ರಾ ಪೆವಿಲಿಯನ್ಗಟ್ಟಿದ್ದರು. ನಂತರ ಬಂದ ಫಹಾದ್ ಮುನೀರ್ 16 ಎಸೆತಗಳಲ್ಲಿ ಸೊನ್ನೆ ಸುತ್ತಿದರು. ಇವರ ವಿಕೆಟ್ ರವಿ ಬಿಶ್ನೋಯ್ ಪಾಲಾಯಿತು.
34 ರನ್ಗಳಿಗೆ 2 ವಿಕೆಟ್ ಕಳದುಕೊಂಡು ಕಡಿಮೆ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಪಾಕಿಸ್ತಾನಕ್ಕೆ ಹೈದರ್ ಅಲಿ (56) ಹಾಗೂ ವಿಕೆಟ್ ಕೀಪರ್ ರೊಹೈಲ್ (62) ನಾಲ್ಕನೇ ವಿಕೆಟ್ಗೆ 62 ರನ್ಗಳ ಜೊತೆಯಾಟ ನೀಡಿ ಮೇಲೆತ್ತಿದರು. ನಂತರ ಬಂದ ಖಾಸಿಂ(9) ರನ್ಗಳಿಸಿ ರನೌಟ್ ಆದರು.
ಹೈದರ್(56) ವಿಕೆಟ್ ಬೀಳುತ್ತಿದ್ದಂತೆ ಪೆವಿಲಿಯನ್ ಪರೇಡ್ ನಡೆಸಿದ ಪಾಕಿಸ್ತಾನ ತಂಡ 43.1 ಓವರ್ಗಳಲ್ಲಿ ಆಲೌಟ್ ಆಯಿತು. ಏಕಾಂಗಿ ಹೋರಾಟ ಪ್ರದರ್ಶಸಿದ ನಾಯಕ ರೊಹೈಲ್ 102 ಎಸೆತಗಳಲ್ಲಿ 6 ಬೌಂಡರಿ ಸಹಿತ 62 ರನ್ಗಳಿಸಿದರು. ಮೊಹಮ್ಮದ್ ಹ್ಯಾರೀಸ್ 21 ರನ್ಗಳಿಸಿದ್ದು ಬಿಟ್ಟರೆ ತಂಡದ ಯಾವೊಬ್ಬ ಬ್ಯಾಟ್ಸ್ಮನ್ ಎರಡಂಕಿ ಮೊತ್ತದಾಟಲು ಭಾರತದ ಬೌಲರ್ಗಳು ಅವಕಾಶ ನೀಡಲಿಲ್ಲ.
ಭಾರತದ ಪರ ಸುಶಾಂತ್ ಮಿಶ್ರಾ 3, ಕಾರ್ತಿಕ್ ತ್ಯಾಗಿ 2, ರವಿ ಬಿಶೋನಿ 3 , ಜೈಸ್ವಾಲ್ ಹಾಗೂ ಅಥರ್ವ ಆಂಕೋಲಕರ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.