ಹೈದರಾಬಾದ್: ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ಶ್ರೇಷ್ಠ ಕ್ರಿಕೆಟಿಗರು 300 ರಿಂದ 400 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿ ಅದ್ವಿತೀಯ ಸಾಧನೆ ಮಾಡಿದ್ದಾರೆ. ಆದರೆ ತಮ್ಮ ಆಟದ ಮೂಲಕ ದೇಶಕ್ಕೆ ಅತಿ ಹೆಚ್ಚು ಗೆಲುವುಗಳನ್ನು ತಂದು ಕೊಟ್ಟ ಟಾಪ್ ಕ್ರಿಕೆಟಿಗರು ಯಾರೆಂಬುದು ನಿಮಗೆ ಗೊತ್ತಾ? ಕೆಲ ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿ ಅತಿಹೆಚ್ಚು ಗೆಲುವು ತಂದುಕೊಟ್ಟು, ಈಗ ನಿವೃತ್ತಿಯಾಗಿರುವ ಅಥವಾ ಕೋಚ್ ಆಗಿ ಕೆಲಸ ಮಾಡುತ್ತಿರುವ ಟಾಪ್ ಐವರು ಕ್ರಿಕೆಟಿಗರ ಮಾಹಿತಿ ಇಲ್ಲಿದೆ ನೋಡಿ.
ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೆಚ್ಚು ಪಂದ್ಯಗಳ ಗೆಲುವಿಗೆ ಕಾರಣರಾದ ದಿಗ್ಗಜರ ಪಟ್ಟಿ:
ರಿಕಿ ಪಾಂಟಿಂಗ್
ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ರಿಕಿ ಪಾಂಟಿಂಗ್ ತಮ್ಮ ನಾಯಕತ್ವದಲ್ಲಿ ಆಸ್ಟ್ರೇಲಿಯಾಗೆ ಎರಡು ಬಾರಿ ವಿಶ್ವಕಪ್ ಚಾಂಪಿಯನ್ ಪಟ್ಟ ತಂದಿರುವ ಹೆಗ್ಗಳಿಕೆ ಹೊಂದಿದ್ದಾರೆ. ಏಕದಿನ ಹಾಗೂ ಟೆಸ್ಟ್ ಎರಡೂ ಮಾದರಿಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಸ್ಟ್ರೇಲಿಯಾದ ಕ್ರಿಕೆಟ್ ಪಟು ಇವರಾಗಿರುವರು. ಎರಡೂ ಮಾದರಿಗಳನ್ನು ಸೇರಿಸಿ ಒಟ್ಟು 13,000 ರನ್ ಕಲೆ ಹಾಕಿದ್ದಾರೆ. 1995 ರಿಂದ 2012 ರ ಮಧ್ಯೆ ಆಸ್ಟ್ರೇಲಿಯಾ ಹಾಗೂ ಐಸಿಸಿ ವಿಶ್ವ ಇಲೆವೆನ್ ತಂಡಗಳ ಪರವಾಗಿ 375 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಓರ್ವ ಆಟಗಾರನಾಗಿ 262 ಪಂದ್ಯಗಳನ್ನು ಗೆದ್ದಿದ್ದು ಏಕದಿನ ಕ್ರಿಕೆಟ್ನ ಅಂತಾರಾಷ್ಟ್ರೀಯ ದಾಖಲೆಯಾಗಿದೆ. 229 ಪಂದ್ಯಗಳಲ್ಲಿ ನಾಯಕತ್ವ ವಹಿಸಿ ಅದರಲ್ಲಿ 164 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದಾರೆ. ರಿಕಿ ಪಾಂಟಿಂಗ್ ಸರಾಸರಿ ಗೆಲುವಿನ ಪ್ರಮಾಣ ಶೇ. 71.62 ರಷ್ಟಿದೆ.
ಸಚಿನ್ ತೆಂಡೂಲ್ಕರ್
ಭಾರತದ ಶ್ರೇಷ್ಠ ಕ್ರಿಕೆಟ್ ಪಟು, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಆಧುನಿಕ ಕ್ರಿಕೆಟ್ ಯುಗದ ದೇವರೆನಿಸಿಕೊಂಡಿದ್ದಾರೆ. ಸಚಿನ್ ಭಾರತ ಹಾಗೂ ಏಷ್ಯಾ ಇಲೆವೆನ್ ತಂಡಗಳ ಪರ 463 ಏಕದಿನ ಪಂದ್ಯ ಆಡಿದ್ದಾರೆ. ಇವರು ಆಡಿದ ಶೇ.50 ಕ್ಕೂ ಹೆಚ್ಚು ಪಂದ್ಯಗಳಲ್ಲಿ ಭಾರತ ಗೆದ್ದಿದೆ. ಸಚಿನ್ ಸೆಂಚುರಿ ಬಾರಿಸಿದ 49 ಪಂದ್ಯಗಳ ಪೈಕಿ ಭಾರತ 33 ರಲ್ಲಿ ಗೆಲುವು ದಾಖಲಿಸಿದ್ದು ಅವರ ಸಾಮರ್ಥ್ಯವನ್ನು ತೋರಿಸುತ್ತದೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಏಕೈಕ ಬ್ಯಾಟ್ಸಮನ್ ಸಚಿನ್. ಟೆಸ್ಟ್ಗಳಲ್ಲಿ 15,921 ರನ್ ಹಾಗೂ ಒನ್ಡೇ ಗಳಲ್ಲಿ 18,426 ರನ್ಗಳನ್ನು ಇವರು ಪೇರಿಸಿದ್ದಾರೆ. ನೂರು ಸೆಂಚುರಿಗಳನ್ನು ಬಾರಿಸಿದ ವಿಶ್ವದ ಏಕೈಕ ಬ್ಯಾಟ್ಸಮನ್ ಸಚಿನ್. ಆದರೆ ಒಬ್ಬ ನಾಯಕನಾಗಿ ತಂಡವನ್ನು ಮುನ್ನಡೆಸುವಲ್ಲಿ ಮಾತ್ರ ಇವರು ವಿಫಲರಾಗಿದ್ದರು. ತಾವು ನಾಯಕರಾಗಿದ್ದ 73 ಪಂದ್ಯಗಳ ಪೈಕಿ 43 ರಲ್ಲಿ ಸೋಲನುಭವಿಸಬೇಕಾಯಿತು.
ಸನತ್ ಜಯಸೂರ್ಯ
1996 ರಲ್ಲಿ ಶ್ರೀಲಂಕಾಗೆ ಪ್ರಥಮ ವಿಶ್ವಕಪ್ ಜಯ ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸನತ್ ಜಯಸೂರ್ಯ ಶ್ರೀಲಂಕಾ ಹಾಗೂ ವಿಶ್ವ ಎಲೆವೆನ್ ತಂಡಗಳ ಪರ 445 ಪಂದ್ಯಗಳನ್ನಾಡಿದ್ದಾರೆ. ಸನತ್ ತಮ್ಮ ಕಾಲದ ಅತ್ಯಂತ ಬಿರುಸಿನ ಆಟಗಾರರಲ್ಲೊಬ್ಬರಾಗಿದ್ದರು. ಎಂಥದೇ ಪರಿಸ್ಥಿತಿಗಳಲ್ಲೂ ತಂಡವನ್ನು ಜಯದತ್ತ ಕೊಂಡೊಯ್ಯುವ ಇವರು ಅದ್ಭುತ ಸಾಮರ್ಥ್ಯಕ್ಕೆ ಬೇರಾರೂ ಸಾಟಿಯಿಲ್ಲ. 1996 ರ ವಿಶ್ವಕಪ್ ಪಂದ್ಯಾವಳಿಯಲ್ಲಿ 221 ರನ್ ಗಳಿಸಿ, 7 ವಿಕೆಟ್ ಪಡೆಯುವ ಮೂಲಕ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಗೌರವ ತಮ್ಮದಾಗಿಸಿಕೊಂಡಿದ್ದರು.
ಇವರಾಡಿದ 445 ಪಂದ್ಯಗಳ ಪೈಕಿ 233ರಲ್ಲಿ ಶ್ರೀಲಂಕಾ ಜಯಿಸಿದೆ. 117 ಪಂದ್ಯಗಳಲ್ಲಿ ತಂಡದ ನಾಯಕತ್ವ ವಹಿಸಿದ್ದರು. 2003 ರ ವಿಶ್ವಕಪ್ನಲ್ಲಿ ಶ್ರೀಲಂಕಾ ತಂಡವನ್ನು ಸೆಮಿಫೈನಲ್ವರೆಗೂ ಕರೆತಂದಿದ್ದರಾದರೂ ಅಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಬೇಕಾಯಿತು. ನಾಯಕರಾಗಿ ಆಡಿದ ಪಂದ್ಯಗಳ ಪೈಕಿ 65 ರಲ್ಲಿ ಜಯ ಸಾಧಿಸಿದ್ದು, 47 ರಲ್ಲಿ ಸೋತಿದ್ದಾರೆ.
ಮಹೇಲ ಜಯವರ್ಧನೆ
ವಿಶ್ವ ಶ್ರೇಷ್ಠ ಕ್ರಿಕೆಟಿಗರ ಪಟ್ಟಿಯಲ್ಲಿ ಹೆಚ್ಚಿನವರು ಏಷ್ಯಾ ಖಂಡದವರೇ ಆಗಿರುವುದು ಗಮನಾರ್ಹ. ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಮತ್ತೋರ್ವ ಶ್ರೇಷ್ಠ ಕ್ರಿಕೆಟಿಗ ಮಹೇಲ ಜಯವರ್ಧನೆ. ಇವರು 448 ಪಂದ್ಯಗಳನ್ನಾಡಿದ್ದು, ಸಚಿನ್ ಆಡಿದ 463 ಪಂದ್ಯಗಳ ನಂತರ ಎರಡನೇ ಸ್ಥಾನದಲ್ಲಿದ್ದಾರೆ. ಅತಿಶ್ರೇಷ್ಠ ಬಲಗೈ ಬ್ಯಾಟ್ಸಮನ್ ಆದ ಮಹೇಲ, 33.37 ಸರಾಸರಿಯೊಂದಿಗೆ 12650 ಏಕದಿನ ರನ್ ಹಾಗೂ 49.84 ಸರಾಸರಿಯೊಂದಿಗೆ 11,814 ಟೆಸ್ಟ್ ರನ್ಗಳನ್ನು ಸಂಪಾದಿಸಿದ್ದಾರೆ.
ತಮ್ಮ ಕ್ರಿಕೆಟ್ ಕರಿಯರ್ನಲ್ಲಿ 241 ಪಂದ್ಯಗಳಲ್ಲಿ ಜಯ ದಾಖಲಿಸಿದ್ದು ಇವರ ಸಾಧನೆಯಾಗಿದೆ. 130 ಪಂದ್ಯಗಳಲ್ಲಿ ಶ್ರೀಲಂಕಾ ತಂಡದ ನಾಯಕತ್ವ ವಹಿಸಿದ್ದರು. 2007 ರಲ್ಲಿ ಜಯವರ್ಧನೆ ನಾಯಕತ್ವದ ಶ್ರೀಲಂಕಾ ತಂಡ ಫೈನಲ್ವರೆಗೂ ತಲುಪಿ ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು. ನಾಯಕನಾಗಿ 72 ರಲ್ಲಿ ಗೆಲುವು ಸಾಧಿಸಿದ್ದು, 49 ರಲ್ಲಿ ಸೋತಿದ್ದಾರೆ.
ಇಂಜಮಮ್ ಉಲ್ ಹಕ್
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಇಂಜಮಮ್ ಉಲ್ ಹಕ್ ಅವರ ಸಾಧನೆಯನ್ನು ಯಾರೂ ಮರೆಯುವಂತಿಲ್ಲ. ಅತ್ಯಂತ ಶ್ರೇಷ್ಠ ಬ್ಯಾಟ್ಸಮನ್ ಆಗಿದ್ದ ಇಂಜಮಾಮ್, ಪಾಕಿಸ್ತಾನ, ಏಷ್ಯಾ ಇಲೆವೆನ್ ಹಾಗೂ ಐಸಿಸಿ ಎಲೆವೆನ್ ತಂಡಗಳ ಪರವಾಗಿ 378 ಪಂದ್ಯಗಳನ್ನಾಡಿದ್ದಾರೆ. 11739 ರನ್ ಗಳಿಸಿರುವ ಇವರು, ಅತಿ ಹೆಚ್ಚು ರನ್ ಗಳಿಸಿದ ಪಾಕ್ ಕ್ರಿಕೆಟಿಗ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. 1992 ರಲ್ಲಿ ಪಾಕಿಸ್ತಾನಕ್ಕೆ ವಿಶ್ವಕಪ್ ತಂದುಕೊಟ್ಟ ಹೀರೋ ಇವರು.
1992 ರ ವಿಶ್ವಕಪ್ನಲ್ಲಿ ಆಟ ಆರಂಭಿಸಿದ ಇಂಜಮಮ್ 2007 ರವರೆಗೂ ಆಟವಾಡಿದರು. ಇವರು ಒಟ್ಟು 215 ಪಂದ್ಯಗಳಲ್ಲಿ ಜಯ ತಂದುಕೊಟ್ಟಿದ್ದಾರೆ. ತಾವು ನಾಯಕರಾಗಿದ್ದ 89 ಪಂದ್ಯಗಳ ಪೈಕಿ 52 ರಲ್ಲಿ ಜಯಿಸಿದ್ದಾರೆ. ಪಾಕ್ ಕ್ರಿಕೆಟ್ ಇತಿಹಾಸದಲ್ಲಿ ಇಂಜಮಾಮ್ರಷ್ಟು ಜಯ ತಂದುಕೊಟ್ಟ ಮತ್ತೊಬ್ಬ ಕ್ರಿಕೆಟಿಗ ಇಲ್ಲ.