ಮೆಲ್ಬೋರ್ನ್(ಆಸ್ಟ್ರೇಲಿಯಾ): ಆಸ್ಟ್ರೇಲಿಯಾ ನಾಯಕ ಟಿಮ್ ಪೇನ್ ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 150 ಮಂದಿಯನ್ನು ಔಟ್ ಮಾಡಿದ ವಿಕೆಟ್ ಕೀಪರ್ ಎಂಬ ದಾಖಲೆ ಬರೆದಿದ್ದಾರೆ.
ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಭಾರತ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಎರಡನೇ ದಿನದಲ್ಲಿ ಪೇನ್ ಈ ಸಾಧನೆ ಮಾಡಿದ್ದಾರೆ. ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ರಿಷಭ್ ಪಂತ್ ನೀಡಿದ ಕ್ಯಾಚ್ ಪಡೆಯುವ ಮೂಲಕ ಕಡಿಮೆ ಇನ್ನಿಂಗ್ಸ್‌ಗಳಲ್ಲಿ ವಿಕೆಟ್ ಹಿಂದೆ 150 ಮಂದಿಯನ್ನು ಔಟ್ ಮಾಡಿದ ವಿಕೆಟ್ ಕೀಪರ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಪಂತ್ರನ್ನು ಪೆವಿಲಿಯನ್ ಸೇರಿಸಿದ ಸ್ಟಾರ್ಕ್ ಟೆಸ್ಟ್ ಕ್ರಿಕೆಟ್‌ನಲ್ಲಿ 250 ವಿಕೆಟ್ ಪಡೆದ ವೇಗಿ ಎಂಬ ದಾಖಲೆ ಬರೆದಿದ್ದಾರೆ. ಈ ಹಿಂದೆ ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ 34 ಇನ್ನಿಂಗ್ಸ್‌ಗಳಲ್ಲಿ 150 ಮಂದಿಯನ್ನು ಔಟ್ ಮಾಡಿ ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 150 ಮಂದಿಯನ್ನು ಔಟ್ ಮಾಡಿದ ವಿಕೆಟ್ ಕೀಪರ್ ಎಂಬ ದಾಖಲೆ ಬರೆದಿದ್ದರು.
ಇದೀಗ ಆಸೀಸ್ ನಾಯಕ ಟಿಮ್ ಪೇನ್ 33 ಇನ್ನಿಂಗ್ಸ್ನಲ್ಲಿ ಈ ಸಾಧನೆ ಮಾಡಿದ್ದಾರೆ. ಆಸ್ಟ್ರೇಲಿಯಾ ತಂಡದ ಮಾಜಿ ವಿಕೆಟ್ ಕೀಪರ್ ಗಿಲ್ಕ್ರಿಸ್ಟ್ 150 ಬಲಿ ಪಡೆಯಲು 36 ಇನ್ನಿಂಗ್ಸ್ ತೆಗೆದುಕೊಂಡಿದ್ರೆ, ದಕ್ಷಿಣ ಆಫ್ರಿಕಾದ ಮಾರ್ಕ್ ಬೌಚರ್ 38 ಇನ್ನಿಂಗ್ಸ್‌ಗಳಲ್ಲಿ 150 ಔಟ್ ಮಾಡಿದ್ದಾರೆ.