ಕೇಪ್ಟೌನ್: ಮುಂಬರುವ ಇಂಗ್ಲೆಂಡ್ ವಿರುದ್ಧದ ಸರಣಿಗಾಗಿ ನಡೆಸಿದ ಕೋವಿಡ್ ಟೆಸ್ಟ್ನಲ್ಲಿ ದಕ್ಷಿಣ ಆಫ್ರಿಕಾದ ಒಬ್ಬ ಆಟಗಾರನಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಬೋರ್ಡ್ ಖಚಿತಪಡಿಸಿದೆ.
ನವೆಂಬರ್ 27ರಂದು ಇಂಗ್ಲೆಂಡ್ ವಿರುದ್ಧ ಆರಂಭಗೊಳ್ಳುವ ಸೀಮಿತ ಓವರ್ಗಳಿಗಾಗಿ 50 ಮಂದಿಗೆ ಕೋವಿಡ್ ಆರ್ಟಿಪಿಸಿಆರ್ ಟೆಸ್ಟ್ಗಳನ್ನು ನಡೆಸಲಾಗಿದ್ದು, ಅದರಲ್ಲಿ ಒಬ್ಬ ಆಟಗಾರನಿಗೆ ಪಾಸಿಟಿವ್ ದೃಢಪಟ್ಟಿದೆ. ಹಾಗಾಗಿ ಅವರ ಜೊತೆ ಸಂಪರ್ಕದಲ್ಲಿದ್ದ ಮತ್ತಿಬ್ಬರು ಕ್ರಿಕೆಟಿಗರು ಕೂಡ ಐಸೋಲೇಷನ್ಗೆ ಒಳಗಾಗಿದ್ದಾರೆ ಎಂದು ಸಿಎಸ್ಎ ಹೇಳಿಕೆ ಬಿಡುಗಡೆ ಮಾಡಿದೆ.
ಕೋವಿಡ್-19 ಪ್ರೋಟೋಕಾಲ್ಗಳ ಪ್ರಕಾರ ಮೂವರು ಆಟಗಾರರು ತಕ್ಷಣದಲ್ಲೇ ಕೇಪ್ಪೇಟ್ನಲ್ಲಿ ಐಸೋಲೇಷನ್ಗೆ ಒಳಗಾಗಿದ್ದಾರೆ. ಎಲ್ಲಾ ಆಟಗಾರರು ಲಕ್ಷಣ ರಹಿತರಾಗಿದ್ದರೂ ಸಿಎಸ್ಎ ವೈದ್ಯಕೀಯ ತಂಡ ಅವರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಮೇಲ್ವಿಚಾರಣೆ ಮಾಡುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಈ ಮೂವರು ಆಟಗಾರರಿಗೆ ಯಾವುದೇ ಬದಲಿ ಆಟಗಾರರನ್ನು ಆಯ್ಕೆ ಮಾಡಲಾಗಿಲ್ಲ. ಆದರೆ ವಾರಾಂತ್ಯದಲ್ಲಿ ನಡೆಯಲಿರುವ ಇಂಟ್ರಾ ಸ್ಕ್ವಾಡ್ ತಂಡಗಳ ಅಭ್ಯಾಸ ಪಂದ್ಯಕ್ಕೂ ಮುನ್ನ ಇಬ್ಬರು ಹೊಸ ಆಟಗಾರರನ್ನು ಹೆಸರಿಸುವುದಾಗಿ ಮಂಡಳಿ ತಿಳಿಸಿದೆ.
ಆದರೆ ಕೋವಿಡ್ ಸೋಂಕು ತಗುಲಿರುವ ಆಟಗಾರ ಮತ್ತು ಐಸೋಲೇಷನ್ಗಳೊಗಾಗಿರುವ ಮತ್ತಿಬ್ಬರು ಆಟಗಾರರ ಬಗ್ಗೆ ಸಿಎಸ್ಎ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ.