ಹೈದರಾಬಾದ್:ವಿಶ್ವ ಕಂಡ ಸ್ಫೋಟಕ ಬ್ಯಾಟ್ಸ್ಮನ್ ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್ ವೇಗದ 150 ರನ್ ಗಳಿಸಿ ಇಂದಿಗೆ 5 ವರ್ಷ ತುಂಬಿದ್ದು, ಐಸಿಸಿ ಈ ಸಿಹಿ ನೆನಪನ್ನು ಟ್ವೀಟ್ ಮಾಡುವ ಮೂಲಕ ಸ್ಮರಿಸಿಕೊಂಡಿದೆ.
ಆಸ್ಟ್ರೇಲಿಯಾದಲ್ಲಿ ನಡೆದಿದ್ದ 2015ರ ವಿಶ್ವಕಪ್ನ 19ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ವಿಂಡೀಸ್ ತಂಡವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ದಕ್ಷಿಣ ಆಫ್ರಿಕಾ ತಂಡ 29.4 ಓವರ್ಗಳಲ್ಲಿ 146 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಅಲ್ಲಿಯವರೆಗೆ ಹರಿಣಗಳ ರನ್ ರೇಟ್ 5ರ ಆಸುಪಾಸಿನಲ್ಲಿತ್ತು.
ಆದರೆ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಇಳಿದಿದ್ದ ಮಿಸ್ಟರ್ 360 ಖ್ಯಾತಿಯ ಎಬಿಡಿ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದರು. ಅದು ಕೇವಲ 66 ಎಸೆತಗಳಲ್ಲಿ ಬರೋಬ್ಬರಿ 162 ರನ್ ಸಿಡಿಸುವ ಮೂಲಕ 30 ಓವರ್ಗಳಲ್ಲಿ 150ರ ಸನಿಹದಲ್ಲಿದ್ದ ಹರಿಣ ಪಡೆಯನ್ನು 50 ಓವರ್ಗಳು ಮುಗಿದಾಗ 408 ರನ್ಗೇರಿಸಿದ್ದರು. 30 ಓವರ್ ತನಕ 5 ಇದ್ದ ರನ್ ರೇಟ್ 50 ಓವರ್ ಮುಗಿದಾಗ 8.16 ಆಗಿತ್ತು.
ತಂಡ ಸಂಕಷ್ಟದಲ್ಲಿದ್ದಾಗ ಬ್ಯಾಟಿಂಗ್ ಮಾಡಲು ಇಳಿದಿದ್ದ ಎಬಿಡಿ ನಾಯಕನ ಆಟವಾಡಿ ಕೇವಲ 66 ಎಸೆತಗಳಲ್ಲಿ 17 ಬೌಂಡರಿ, 8 ಸಿಕ್ಸರ್ ಸಹಿತ 162 ರನ್ ಗಳಿಸಿ ಮೈದಾನದ ತುಂಬೆಲ್ಲಾ ಬೌಂಡರಿ-ಸಿಕ್ಸರ್ಗಳ ಸುರಿಮಳೆ ಸುರಿಸಿದ್ದರು.
ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನೀಡಿದ್ದ 409 ರನ್ಗಳ ಗುರಿ ಬೆನ್ನತ್ತಿದ್ದ ವಿಂಡೀಸ್ ಕೇವಲ 151 ರನ್ಗಳಿಗೆ ಆಲೌಟ್ ಆಗಿ 257 ರನ್ಗಳ ಬೃಹತ್ ಅಂತರದ ಸೋಲು ಕಂಡಿತ್ತು.