ನವದೆಹಲಿ: 2019ರ ವಿಶ್ವಕಪ್ ಫೈನಲ್ ನಡೆದು ಇಂದಿಗೆ ಒಂದು ವರ್ಷದ ಕಳೆದಿದ್ದು, ಬಲು ರೋಚಕತೆಯಿಂದ ಕೂಡಿದ್ದ ಫೈನಲ್ ಪಂದ್ಯ ಹಲವು ವಿವಾದ, ವಿಷಾದಕ್ಕೆ ಒಳಗಾಗಿ ಕೊನೆಗೆ ಕ್ರಿಕೆಟ್ನಲ್ಲಿ ಹಲವು ಬದಲಾವಣೆಗೆ ನಾಂದಿ ಹಾಡಿ ಇಂದಿಗೆ ಒಂದು ವರ್ಷ ಕಳೆದಿದೆ.
ಕ್ರಿಕೆಟ್ ಜನಕರಾದ ಇಂಗ್ಲೆಂಡ್ ತಂಡ ವಿಶ್ವಕಪ್ ಗೆದ್ದ ಸಂಭ್ರಮವನ್ನಾಚರಿಸುತ್ತಿದ್ದರೆ, ಇತ್ತ ಇಂಗ್ಲೆಂಡ್ ವಿಚಿತ್ರ ನಿಯಮಕ್ಕೆ ಅಸಹಾಯಕರಾಗಿ ಸೋಲೊಪ್ಪಿಕೊಂಡ ಕಹಿ ನೆನಪಿನಲ್ಲಿದೆ. ಆದರೆ, ಈ ಕಿವೀಸ್ ತಂಡದ ಸೋಲು ಐಸಿಸಿಯ ಬೌಂಡರಿ ಕೌಂಟ್ ಮೂಲಕ ವಿಜೇತ ತಂಡವನ್ನು ಘೋಷಿಸಬಹುದು ಎಂಬ ನಿಯಮವನ್ನು ತೆಗೆದು ಹಾಕಲು ನೆರವಾಯಿತು.
ಇಂಗ್ಲೆಂಡ್ - ನ್ಯೂಜಿಲ್ಯಾಂಡ್ ಫೈನಲ್ ಪಂದ್ಯದ ಹೈಲೈಟ್ಸ್
ಲಂಡನ್ ಲಾರ್ಡ್ಸ್ ಸ್ಟೇಡಿಯಂನಲ್ಲಿ ನಡೆದಿದ್ದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲ್ಯಾಂಡ್, ಹೆನ್ರಿ ನಿಕೋಲ್ಸ್ 55, ನಾಯಕ ಕೇನ್ ವಿಲಿಯಮ್ಸನ್ 30, ಟಾಮ್ ಲ್ಯಾಥಮ್ 47 ರನ್ಗಳ ನೆರವಿನಿಂದ 50 ಓವರ್‌ಗೆ 8 ವಿಕೆಟ್ ಕಳೆದು 241 ರನ್ ಗಳಿಸಿತ್ತು.
ಈ ಮೊತ್ತವನ್ನು ಬೆನ್ನೆಟ್ಟಿದ್ದ ಇಂಗ್ಲೆಂಡ್ ಜಾನಿ ಬೈರ್ಸ್ಟೋವ್ 36, ಆಲ್ರೌಂಡರ್ ಬೆನ್ ಸ್ಟೋಕ್ಸ್ ಔಟಾಗದೇ 84, ಜೋಸ್ ಬಟ್ಲರ್ 59, ಭರ್ಜರಿ ಸಮಯೋಚಿತ ಆಟದ ನೆರವಿನಿಂದ 50 ಓವರ್ಗಳಲ್ಲಿ 241 ರನ್ ಬಾರಿಸಿ ಪಂದ್ಯವನ್ನು ಟೈ ಮಾಡಿಕೊಂಡಿತ್ತು.
ಸೂಪರ್ ಓವರ್ನಲ್ಲೂ ಟೈ
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ನಡೆದಿದ್ದ ಮೊದಲ ಸೂಪರ್ ಓವರ್ನಲ್ಲಿ ಇಂಗ್ಲೆಂಡ್ 16 ರನ್ಗಳಿಸಿತ್ತು. ಇತ್ತ ಚೇಸಿಂಗ್ ಮಾಡಿದ ನ್ಯೂಜಿಲ್ಯಾಂಡ್ ತಂಡ ಕೂಡ 16 ರನ್ಗಳಿಸಿತು. ಆದರೆ, ಮೊದಲೇ ನಿಶ್ಚಯಿಸಿದಂತೆ ಹೆಚ್ಚು ಬೌಂಡರಿ ಸಿಡಿಸಿದ್ದ ಇಂಗ್ಲೆಂಡ್ ತಂಡನ್ನು ವಿಜೇತ ತಂಡ ಎಂದು ಘೋಷಿಸಲಾಯಿತು. ಇಂಗ್ಲೆಂಡ್ 26 ಬೌಂಡರಿ ಸಿಡಿಸಿದ್ದರೆ, ಕಿವೀಸ್ ಕೇವಲ 17 ಬೌಂಡರಿ ದಾಖಲಿಸಿತ್ತು.
ಆದರೆ, ಈ ನಿಯಮ ಕ್ರಿಕೆಟ್ ವಲಯದಲ್ಲಿ ಕೋಲಾಹಲ ಎಬ್ಬಿಸಿತು. ಬೌಂಡರಿ ಲೆಕ್ಕಾಚಾರದ ನಿರ್ಧಾರದ ವಿರುದ್ಧ ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳು ಟೀಕಿಸಲಾರಂಭಿಸಿದರು. ಕೊನೆಗೆ ಅನಿಲ್ ಕುಂಬ್ಳೆ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿ ಬೌಂಡರಿ ಲೆಕ್ಕಾಚಾರದಿಂದ ಗೆಲುವು ನಿರ್ಧರಿಸುವ ನಿಯಮವನ್ನು ರದ್ದುಮಾಡಿ, ತಂಡಕ್ಕೆ ಸಂಪೂರ್ಣ ಫಲಿತಾಂಶ ಸಿಗುವವರೆಗೂ ಸೂಪರ್ ಓವರ್ ನಡೆಸಬೇಕು ಎಂಬ ನಿಯಮವನ್ನು ಜಾರಿಗೆ ತರಲಾಯಿತು.