ಮುಂಬೈ:ಕ್ರಿಕೆಟ್ನಲ್ಲಿ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ನಂತಹ ಬಲಿಷ್ಠ ತಂಡಗಳ ನಡುವೆ ಕ್ರಿಕೆಟ್ಗೆ ಆಗಷ್ಟೇ ಕಾಲಿಟ್ಟಿದ್ದ ಭಾರತ ತಂಡ 1983 ರಲ್ಲಿ ವಿಶ್ವಕಪ್ ಎತ್ತಿ ಹಿಡಿದಿತ್ತು. ಆ ಟೂರ್ನಿಯಲ್ಲಿ ನಾಯಕರಾಗಿದ್ದ ಕಪಿಲ್ ದೇವ್ ಜಿಂಬಾಬ್ವೆ ವಿರುದ್ಧ ಸಿಡಿಸಿದ್ದ 175 ರನ್ಗಳು, ಕ್ರಿಕೆಟ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಇನ್ನಿಂಗ್ಸ್ ಎಂದೇ ಪರಿಗಣಿಸಲಾಗಿದೆ. ಭಾರತೀಯರ ಪಾಲಿಗೆ ಅವಿಸ್ಮರಣೀಯವೆನಿಸಿರುವ ಆ ಇನ್ನಿಂಗ್ಸ್ಗೆ ಇಂದು 37 ವರ್ಷಗಳು ತುಂಬಿದೆ.
1983 ಜೂನ್ 18 ರಂದು ವಿಶ್ವಕಪ್ ಲೀಗ್ ಪಂದ್ಯದಲ್ಲಿ ಭಾರತ ತಂಡ ಜಿಂಬಾಬ್ವೆ ತಂಡವನ್ನು ಎದುರಿಸಿತ್ತು. ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತ ತಂಡ ಕೇವಲ 17 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಆ ಸಂದರ್ಭದಲ್ಲಿ ಆಪತ್ಪಾಂದವನಾಗಿ ಬಂದ ನಾಯಕ ಕಪಿಲ್ ದೇವ್ ಜಿಂಬಾಬ್ವೆ ಬೌಲರ್ಗಳನ್ನು ಏಕಾಂಗಿಯಾಗಿ ಎದುರಿಸಿದರಲ್ಲದೇ ಮನ ಬಂದಂತೆ ದಂಡಿಸಿ ಭರ್ಜರಿ ಶತಕ ಸಿಡಿಸಿದ್ದರು.
138 ಎಸೆತಗಳನ್ನು ಎದುರಿಸಿದ ಅಜೇಯ 175 ರನ್ಗಳಿಸುವ ಮೂಲಕ ವಿಶ್ವಕಪ್ ಇತಿಹಾಸದಲ್ಲಿ ಗರಿಷ್ಠ ರನ್ಗಳಿಸಿದ ದಾಖಲೆಯನ್ನು ದಶಕಗಳ ಕಾಲ ತಮ್ಮ ಹೆಸರಿನಲ್ಲೇ ಬರೆದಿಟ್ಟುಕೊಂಡಿದ್ದರು. ಅವರ ಇನ್ನಿಂಗ್ಸ್ನಲ್ಲಿ 16 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್ ಗಳು ಕೂಡ ಇದ್ದವು.
ಕಪಿಲ್ ಏಕಾಂಗಿ ಹೋರಾಟದೊಂದಿಗೆ ಭಾರತ 60 ಓವರ್‌ಗೆ 8 ವಿಕೆಟ್ ನಷ್ಟದಲ್ಲಿ 266 ರನ್ ಕಲೆ ಹಾಕಿತ್ತು. ಗುರಿ ಬೆನ್ನಟ್ಟಿದ ಜಿಂಬಾಬ್ವೆ 57 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 235 ರನ್ ಬಾರಿಸಿ 31 ರನ್‌ನಿಂದ ಶರಣಾಯಿತು. ಕಪಿಲ್ ದೇವ್ ಪಂದ್ಯಶ್ರೇಷ್ಠರೆನಿಸಿದ್ದರು.
1983ರ ವಿಶ್ವಕಪ್ ಗೆಲುವಿನ ಹಿನ್ನೋಟ
8 ತಂಡಗಳು ಸ್ಪರ್ಧಿಸಿದ್ದ ಈ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್, ಜಿಂಬಾಬ್ವೆ ಹಾಗೂ ಆಸ್ಟ್ರೇಲಿಯಾ ತಂಡಗಳೊಂದಿಗೆ ಭಾರತ ಸ್ಥಾನ ಪಡೆದುಕೊಂಡಿತ್ತು. ಲೀಗ್ನಲ್ಲಿ ಮೂರು ತಂಡದ ವಿರುದ್ಧ 2 ಪಂದ್ಯಗಳನ್ನಾಡಿತ್ತು. ವಿಂಡೀಸ್ ಹಾಗೂ ಇಂಗ್ಲೆಂಡ್ ವಿರುದ್ಧ ಒಂದು ಗೆಲುವು, ಒಂದು ಸೋಲು ಕಂಡಿದ್ದ ಕಪಿಲ್ ಪಡೆ, ಜಿಂಬಾಬ್ವೆ ವಿರುದ್ಧ 2 ಪಂದ್ಯಗಳ ಗೆಲುವಿನೊಂದಿಗೆ ಟೂರ್ನಿಯಲ್ಲಿ 4 ಗೆಲುವು ಪಡೆದು ಎ ಗುಂಪಿನಲ್ಲಿ ವಿಂಡೀಸ್ ಜೊತೆ ಸೆಮಿ ಫೈನಲ್ ಪ್ರವೇಶಿಸಿತ್ತು.
ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ಮಣಿಸಿ ಫೈನಲ್ಗೆ ಎಂಟ್ರಿ
ಮೊದಲೆರಡು ವಿಶ್ವಕಪ್ನಲ್ಲಿ ಲೀಗ್ನಲ್ಲೇ ಹೊರಬಿದ್ದಿದ್ದ ಭಾರತ ಸೆಮಿಫೈನಲ್ ಪ್ರವೇಶಿಸಿರುವುದೇ ದೊಡ್ಡ ಸಾಧನೆ. ಇಂಗ್ಲೆಂಡ್ ವಿರುದ್ಧ ಸೋಲು ಕಟ್ಟಿಟ್ಟ ಬುತ್ತಿ ಎಂದೇ ಬಿಂಬಿತವಾಗಿತ್ತು. ಆದರೆ, ಅಂದು ನಡೆದದ್ದೇ ಬೇರೆ. ಮೊದಲು ಬ್ಯಾಟಿಂಗ್ ನಡೆಸಿದ್ದ ಇಂಗ್ಲೆಂಡ್, ಭಾರತದ ಬೌಲಿಂಗ್ ದಾಳಿಗೆ ಸಿಲುಕಿ 213 ರನ್ಗಳಿಗೆ ಆಲೌಟ್ ಆಗಿತ್ತು. ನಾಯಕ ಕಪಿಲ್ ದೇವ್ 35ಕ್ಕೆ 3, ಅಮರ್ನಾಥ್ 27ಕ್ಕೆ 2 ಹಾಗೂ ರೋಜರ್ ಬಿನ್ನಿ 43 ಕ್ಕೆ 2 ವಿಕೆಟ್ ಪಡೆದಿದ್ದರು. 214 ರನ್ಗಳ ಗುರಿ ಬೆನ್ನೆಟ್ಟಿದ್ದ ಭಾರತಕ್ಕೆ ಯಶ್ಪಾಲ್ ಶರ್ಮಾ 61, ಸಂದೀಪ್ ಪಾಟೀಲ್ 51, ಮೋಹಿಂದರ್ ಅಮರನಾಥ 46 ರನ್ಗಳ ನೆರವಿನಿಂದ ಫೈನಲ್ಗೆ ತಲುಪಿತ್ತು.
2 ಬಾರಿಯ ಚಾಂಪಿಯನ್ನರಿಗೆ ಶಾಕ್: ಭಾರತಕ್ಕೆ ಚೊಚ್ಚಲ ವಿಶ್ವಕಪ್
ವಿಂಡೀಸ್ಗೆ ಹ್ಯಾಟ್ರಿಕ್ ಪ್ರಶಸ್ತಿ ಪಕ್ಕಾ ಎಂಬುದು ಎಲ್ಲರ ಅಭಿಪ್ರಾಯವಾಗಿತ್ತು. ಆದರೆ, ಅಂದು ಭಾರತ ನೀಡಿದ ಪ್ರದರ್ಶನಕ್ಕೆ ಕ್ರಿಕೆಟ್ ಜಗತ್ತು ತಲೆಬಾಗಿಸಿತ್ತು. ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತ, ವಿಂಡೀಸ್ ಬೌಲಿಂಗ್ ದಿಗ್ಗಜರಾದ ಮಾರ್ಷಲ್(3 ವಿಕೆಟ್), ಆ್ಯಂಡಿ ಗಾರ್ನರ್ (2), ಜಾಯೊಲ್ ಗಾರ್ನರ್(1), ಮೈಕಲ್ ಹೋಲ್ಡಿಂಗ್ (2 ವಿಕೆಟ್) ಬೌಲಿಂಗ್ ದಾಳಿಗೆ ತತ್ತರಿಸಿ 183 ರನ್ ಗಳಿಸಿತ್ತು. ಭಾರತದ ಪರ ಕೆ.ಶ್ರೀಕಾಂತ್ 38, ಅಮರನಾಥ 26 ರನ್ ಗಳಿಸಿದ್ದೇ ಗರಿಷ್ಠ ಮೊತ್ತವಾಗಿತ್ತು.ಕೇವಲ 183 ರನ್ಗಳನ್ನ ವಿಂಡೀಸ್ ಸುಲಭವಾಗಿ ಚೇಸ್ ಮಾಡಿ ಹ್ಯಾಟ್ರಿಕ್ ಪ್ರಶಸ್ತಿ ಪಡೆಯಬಹುದೆಂದು ಭಾವಿಸಲಾಗಿತ್ತು.
ಆದರೆ, ಸುಲಭದ ಗುರಿ ಪಡೆದ ಗುಂಗಿನಲ್ಲಿ ಕೆಟ್ಟ ಹೊಡೆತಕ್ಕೆ ಕೈ ಹಾಕಿ ವಿಂಡೀಸ್ನ ಬಲಿಷ್ಠ ಬ್ಯಾಟ್ಸ್ಮನ್ಗಳಾದ ವಿವಿಯನ್ ರಿಚರ್ಡ್ಸ್, ಕ್ಲೈವ್ ಲಾಯ್ಡ್, ಗಾರ್ಡನ್ ಗ್ರೀನಿಡ್ಜ್, ಡೆಸ್ಮನ್ ಹೇನಸ್ ಭಾರತದ ಬೌಲರ್ಗಳ ದಾಳಿಗೆ ಉತ್ತರಿಸಲಾಗದೇ ವಿಕೆಟ್ ಕೈ ಚೆಲ್ಲಿದರು. ದಿಗ್ಗಜ ವಿವಿಯನ್ ರಿಚರ್ಡ್ಸ್ ನೀಡಿದ ಅದ್ಭುತ ಕ್ಯಾಚ್ ಪಡೆದ ಕಪಿಲ್ ಭಾರತಕ್ಕೆ ಗೆಲುವು ಖಚಿತಗೊಳಿಸಿದರು. ರಿಚರ್ಡ್ಸ್ ಔಟಾಗುತ್ತಿದ್ದಂತೆ ವಿಂಡೀಸ್ ಬ್ಯಾಟ್ಸ್ಮನ್ಗಳು ಪೆವಿಲಿಯನ್ ಪರೇಡ್ ನಡೆಸಿದರು. ಕೊನೆಗೆ 183 ರನ್ಗಳನ್ನು ಚೇಸ್ ಮಾಡಲಾಗದೇ ವಿಂಡೀಸ್ 140 ರನ್ಗಳಿಗೆ ಅಲೌಟ್ ಆಯಿತು. 43 ರನ್ಗಳ ರೋಚಕ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಕಪಿಲ್ದೇವ್ ಪಡೆ ಕ್ರಿಕೆಟ್ ಜಗತ್ತಿಗೆ ಭಾರತದ ಶಕ್ತಿಯನ್ನ ತೋರಿಸಿತು. ಸತತ 2 ಬಾರಿ ಚಾಂಪಿಯನ್ ಆಗಿದ್ದ ವಿಂಡೀಸ್ಗೆ ಭಾರತ ನೀಡಿದ ಹೊಡೆತ ಹೇಗಿತ್ತೆಂದರೆ ವಿಂಡೀಸ್ 36 ವರ್ಷವಾದರೂ ಇಂದಿಗೂ ಒಮ್ಮೆಯೂ ಫೈನಲ್ ಕೂಡ ತಲುಪಿಲ್ಲ.