ಮ್ಯಾಂಚೇಸ್ಟರ್:ಎರಡನೇ ಟೆಸ್ಟ್ನಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ನಿರ್ಧಾರ ತೆಗೆದುಕೊಂಡು ಕೈ ಸುಟ್ಟಿಕೊಂಡಿದ್ದ ವಿಂಡೀಸ್ ನಾಯಕ ಹೋಲ್ಡರ್ ಮೂರನೇ ಪಂದ್ಯದಲ್ಲೂ ಅದೇ ಟಾಸ್ ಗೆದ್ದು ಮತ್ತೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದನ್ನು ಆರಂಭಿಕ ಬ್ಯಾಟ್ಸ್ಮನ್ ಕ್ರೈಗ್ ಬ್ರಾತ್ವೇಟ್ ಸಮರ್ಥಿಸಿಕೊಂಡಿದ್ದಾರೆ.
ಮೊದಲ ದಿನದಾಟದಲ್ಲಿ ಇಂಗ್ಲೆಂಡ್ 4 ವಿಕೆಟ್ ಕಳೆದುಕೊಂಡು 258 ರನ್ಗಳಿಸಿದೆ. ಜೋಸ್ ಬಟ್ಲರ್ ಹಾಗೂ ಪೋಪ್ ಅದ್ಭುತ ಬ್ಯಾಟಿಂಗ್ ನಡೆಸಿ ಇಂಗ್ಲೆಂಡ್ಗೆ ಆರಂಭಿಕ ಆಘಾತದಿಂದ ಚೇತರಿಸಿಕೊಳ್ಳಲು ನೆರವಾಗಿದ್ದರು.
" ಇದು ತುಂಬಾ ಸುಂದರವಾದ ದಿನವಾಗಿದೆ. ಮೊದಲು ಬೌಲಿಂಗ್ ಮಾಡುವುದು ನಮ್ಮ ಪೂರ್ವಯೋಜಿತವಾಗಿತ್ತು. ಏಕೆಂದರೆ ಪಿಚ್ನಲ್ಲಿ ತೇವಾಂಶವಿದ್ದ ಕಾರಣ ತಂಡ ಅದನ್ನು ಉಪಯೋಗಿಸಿಕೊಳ್ಳಬೇಕಿತ್ತು. ಆದರೆ ಅವರು( ಪೋಪ್-ಬಟ್ಲರ್) ಜೊತೆಯಾಟ ನಡೆಸಿದರು. ಆದರೆ, ನಾವು ನಾಳೆ ಬೆಳಗ್ಗೆ ಆರಂಭದಿಂದಲೇ ಸ್ಕೋರ್ ದರವನ್ನು ನಿಯಂತ್ರಿಸಿ ಅವರ ಮೇಲೆ ಒತ್ತಡ ಹೆಚ್ಚಿಸಿ ಬೇಗ ಕೆಲವು ವಿಕೆಟ್‌ಗಳನ್ನು ಪಡೆಯುತ್ತೇವೆಂದು ನಾನು ಭಾವಿಸಿದ್ದೇನೆ" ಎಂದು ಬ್ರಾಥ್ವೇಟ್ ಹೇಳಿದ್ದಾರೆ.
ಹೊಸ ಚೆಂಡಿನಲ್ಲಿ ಆರಂಭಿಕ ವಿಕೆಟ್ಗಳು ನಿರ್ಣಾಯಕವಾಗಿರುತ್ತವೆ. ನಾವು ಬೇಗನೆ ಒಂದು ವಿಕೆಟ್ ಪಡೆಯದೆ, ಅವರು ಉಳಿಯಲು ಬಿಟ್ಟರೆ ಕಷ್ಟವಾಗುತ್ತದೆ. ವೋಕ್ಸ್ ಕೂಡ ಬ್ಯಾಟಿಂಗ್ ಮಾಡಬಲ್ಲವರಾದ್ದರಿಂದ ಆರಂಭದಲ್ಲೇ ಮೂರು ವಿಕೆಟ್ಗಳ ಪಡೆಯಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನಾವು ಮೊದಲ ಸೆಸೆನ್ನ ಪ್ರಾರಂಭಿಸಿದಾಗ ಬಹಳ ಶಿಸ್ತುಬದ್ಧರಾಗಿರಬೇಕು. ಮೇಲ್ಮೈ ಗಟ್ಟಿಯಾದ ಚೆಂಡು ಯಾವಾಗಲೂ ಒಳ್ಳೆಯದು ಆದ್ದರಿಂದ ಹೊಸ ಚೆಂಡು ನಮಗೆ ನಿರ್ಣಾಯಕವಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ. ಒಮ್ಮೆ ನಾವು ಕೆಲವು ಟೈಟ್ ಓವರ್‌ಗಳೊಂದಿಗೆ ಎದುರಾಳಿಗಳ ಮೇಲೆ ಒತ್ತಡ ಹೇರಿ ಬೇಗನೆ ಕೆಲವು ವಿಕೆಟ್‌ಗಳನ್ನು ಪಡೆಯಬೇಕಿದೆ ಎಂದು ಅವರು ತಿಳಿಸಿದ್ದಾರೆ.
ಮೊದಲ ದಿನ ಇಂಗ್ಲೆಂಡ್ ತಂಡ 122 ರನ್ಗಳಿಸುವಷ್ಟರಲ್ಲಿ ಆರಂಭಿಕ 4 ವಿಕೆಟ್ ಕಳೆದುಕೊಂಡಿತ್ತು. ಅದರಲ್ಲಿ ತಂಡದ ಆಧಾರ ಸ್ತಂಭಗಳಾದ ಜೋ ರೂಟ್(17) ಹಾಗೂ ಬೆನ್ ಸ್ಟೋಕ್ಸ್(20) ವಿಕೆಟ್ ಕಳೆದುಕೊಂಡಿತ್ತು. ಆದರೆ, ಈ ಸಂದರ್ಭದಲ್ಲಿ ಒಂದಾದ ಪೋಪ್ ಹಾಗೂ ಜೋಸ್ ಬಟ್ಲರ್ 5ನೇ ವಿಕೆಟ್ಗೆ ಮುರಿಯದ 136 ರನ್ಗಳ ಜೊತೆಯಾಟ ನಡೆಸಿ ಚೇತರಿಕೆ ನೀಡಿದರು.