ಅಹಮದಾಬಾದ್: ಮೊದಲ ಪಂದ್ಯದಲ್ಲಿ ಆಘಾತಕಾರಿ ಸೋಲಿನ ಬಳಿಕ ಚೇತರಿಸಿಕೊಂಡ ಅತಿಥೇಯ ಭಾರತ ತಂಡ ಸತತ ಎರಡು ಪಂದ್ಯಗಳಲ್ಲಿ ಭರ್ಜರಿ ಜಯ ಗಳಿಸಿ ಸರಣಿಯಲ್ಲಿ 2-1ರಲ್ಲಿ ಮುನ್ನಡೆ ಪಡೆದುಕೊಂಡಿದೆ. ಇದೀಗ ಕೊನೆಯ ಪಂದ್ಯವನ್ನು ಗೆದ್ದು ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಫೈನಲ್ ಪ್ರವೇಶಿಸುವ ಹಾದಿಯಲ್ಲಿದೆ.
ಗುರುವಾರದಿಂದ ಅಹ್ಮದಾಬಾದ್ನಲ್ಲಿ ಆರಂಭವಾಗಲಿರುವ ನಾಲ್ಕನೇ ಟೆಸ್ಟ್‌ನಲ್ಲಿ ಡ್ರಾ ಸಾಧಿಸಿದರೂ ಭಾರತ ಲಾರ್ಡ್ಸ್ನಲ್ಲಿ ನಡೆಯುವ ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆಯಲಿದೆ. ಒಂದು ವೇಳೆ ಸೋತರೆ ಇಬ್ಬರ ಜಗಳ ಮೂರನೆಯವನಿಗೆ ಲಾಭ ಎಂಬಂತೆ ಆಸ್ಟ್ರೇಲಿಯಾ ತಂಡ ಫೈನಲ್ ಪ್ರವೇಶಿಸಲಿದೆ. ಚೆನ್ನೈನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಭಾರತ 227 ರನ್ಗಳಿಂದ ಸೋತರೆ, ನಂತರ 2ನೇ ಪಂದ್ಯವನ್ನು 317 ರನ್‌ಗಳ ಭರ್ಜರಿ ಜಯ ಗಳಿಸಿತ್ತು. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್‌ಗಳಿಂದ ಗೆಲ್ಲುವ ಮೂಲಕ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.
ಮೊಟೆರಾದಲ್ಲಿ ಅಕ್ಷರ್ ಪಟೇಲ್ ಮತ್ತು ಅಶ್ವಿನ್ ಮಾರಕ ದಾಳಿಗೆ ತುತ್ತಾಗಿದ್ದ ಆಂಗ್ಲ ಪಡೆ ಮೊದಲ ಇನ್ನಿಂಗ್ಸ್ನಲ್ಲಿ 11 ಮತ್ತು ಎರಡನೇ ಇನ್ನಿಂಗ್ಸ್ನಲ್ಲಿ 81 ರನ್ಗಳಿಗೆ ಆಲೌಟ್ ಮಾಡಿ ಸುಲಭ ಜಯ ಸಾಧಿಸಿತ್ತು. ಆದರೆ ಈ ಪಂದ್ಯ ಕೇವಲ 2ನೇ ದಿನಕ್ಕೆ ಅಂತ್ಯವಾಗಿದ್ದರಿಂದ ಪಿಚ್ ಬಗ್ಗೆ ಕೆಲವು ಮಾಜಿ ಕ್ರಿಕೆಟಿಗರು ಕಿಡಿಕಾರಿದ್ದರು. ಆದರೆ ಭಾರತ ತಂಡದ ನಾಯಕ ಕೊಹ್ಲಿ ಮತ್ತು ಎರಡೂ ಇನ್ನಿಂಗ್ಸ್ನಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ್ದ ರೋಹಿತ್ ಶರ್ಮಾ ಪಿಚ್ ಬಗ್ಗೆ ಸಮರ್ಥನೆ ಮಾಡಿಕೊಂಡಿದ್ದರು. ಪಿಚ್ ಬದಲಾಗಿ ಬ್ಯಾಟಿಂಗ್ನಲ್ಲಿ ಬದಲಾವಣೆ ಮಾಡಿಕೊಳ್ಳಬೇಕೆಂದು ಆಭಿಪ್ರಾಯಪಟ್ಟಿದ್ದರು.
ಇದೀಗ ಕೊನೆಯ ಪಂದ್ಯ ಕೂಡ ಅದೇ ಪಿಚ್ನಲ್ಲಿ ನಡೆಯಲಿದೆ. ಭಾಗಶಃ ಈ ಪಂದ್ಯದಲ್ಲೂ ಸ್ಪಿನ್ನರ್‌ಗಳೇ ಪ್ರಾಬಲ್ಯ ಸಾಧಿಸಲಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಉಪನಾಯಕ ಅಜಿಂಕ್ಯ ರಹಾನೆ ಇದರ ಬಗ್ಗೆ ಸ್ಪಷ್ಟಪಡಿಸಿದ್ದು, ಪಿಚ್ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದಿದ್ದಾರೆ. ಆದ್ದರಿಂದ ಕೊಹ್ಲಿ ಪಡೆ ಇದರ ಲಾಭ ಪಡೆದು ಸರಣಿ ಗೆಲುವಿನೊಂದಿಗೆ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪ್ರವೇಶಿಸುವ ಸಾಧ್ಯತೆ ಹೆಚ್ಚಿದೆ.
ಸರಣಿಯಲ್ಲಿ ಒಟ್ಟು 60 ವಿಕೆಟ್ಗಳಲ್ಲಿ ಭಾರತೀಯ ಸ್ಪಿನ್ನರ್‌ಗಳು 49 ವಿಕೆಟ್ ಪಡೆದಿದ್ದಾರೆ. ಅದರಲ್ಲೂ ಅಕ್ಷರ್ ಪಟೇಲ್ ಮತ್ತು ರವಿಚಂದ್ರನ್ ಅಶ್ವಿನ್ ಜೊತೆಯಾಗಿ 42 ವಿಕೆಟ್ ಕಬಳಿಸಿದ್ದಾರೆ. ಹಾಗಾಗಿ ಈ ಪಂದ್ಯದಲ್ಲಿ ಬೌಲರ್ಗಳ ಬಗ್ಗೆ ಕೊಹ್ಲಿ ಆತಂಕ ಪಡುವ ಅಗತ್ಯವಿಲ್ಲ. ಅಶ್ವಿನ್- ಅಕ್ಷರ್ ಜೋಡಿ ಮತ್ತೆ ಮೋಡಿ ಮಾಡಲು ಉತ್ಸಾಹದಿಂದ ಕಾಯುತ್ತಿದ್ದಾರೆ. ಇನ್ನು ಬುಮ್ರಾ ಬದಲಿಗೆ ಈ ಪಂದ್ಯದಲ್ಲಿ ಉಮೇಶ್ ಯಾದವ್ ಅಥವಾ ಸಿರಾಜ್ ಕಣಕ್ಕಿಳಿಯುವ ಸಾಧ್ಯತೆಯಿದೆ.
ಆದರೆ ಸರಣಿಯಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳ ಪೈಕಿ ರೋಹಿತ್ ಶರ್ಮಾ ಹೊರತುಪಡಿಸಿ ಯಾವೊಬ್ಬ ಬ್ಯಾಟ್ಸ್ಮನ್ ಹೇಳಿಕೊಳ್ಳುವ ಪ್ರದರ್ಶನ ತೋರಿಲ್ಲ. ರೋಹಿತ್ ಶರ್ಮಾ 2ನೇ ಪಂದ್ಯದ ಶತಕ ಸೇರಿದಂತೆ ಮೂರು ಪಂದ್ಯಗಳಿಂದ 296 ರನ್ ಕಲೆ ಹಾಕುವ ಮೂಲಕ ತಂಡದ ಗರಿಷ್ಠ ಸ್ಕೋರರ್ ಆಗಿದ್ದಾರೆ. ಇನ್ನು 2ನೇ ಸ್ಥಾನದಲ್ಲಿ ಶ್ರೇಷ್ಠ ಬ್ಯಾಟ್ಸ್ಮನ್ಗಳನ್ನೇ ಹಿಂದಿಕ್ಕಿ ಅಶ್ವಿನ್ (176) 2ನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ 2 ಅರ್ಧಶತಕ ಸಿಡಿಸಿದರೂ ಆಟದಲ್ಲಿ ಮೊನಚಿಲ್ಲ, ರಹಾನೆ, ಪೂಜಾರ ಮತ್ತು ಗಿಲ್ ಒಂದೊಂದು ಇನ್ನಿಂಗ್ಸ್ನಲ್ಲಿ ಯಶ ಕಂಡು ಉಳಿದೆಲ್ಲಾ ಇನ್ನಿಂಗ್ಸ್ಗಳಲ್ಲಿ ವಿಫಲರಾಗಿದ್ದಾರೆ. ಫೈನಲ್ಗೂ ಮುನ್ನ ಲಯಕ್ಕೆ ಮರಳಲು ಈ ಪಂದ್ಯ ಕೊನೆಯ ಅವಕಾಶವಾಗಿದೆ.