ಲಂಡನ್: ಪಾಕಿಸ್ತಾನದ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟಿ-20 ಸರಣಿಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ 14 ಸದಸ್ಯರ ತಂಡವನ್ನು ಪ್ರಕಟಿಸಲಾಗಿದೆ. ಐರ್ಲೆಂಡ್ ಸರಣಿಯಂತೆ ಈ ಸರಣಿಯಲ್ಲೂ ಟೆಸ್ಟ್ ಸರಣಿಯಲ್ಲಿರುವ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ.
ಆಗಸ್ಟ್ 28 ರಿಂದ ಮ್ಯಾಂಚೆಸ್ಟರ್ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ 3 ಪಂದ್ಯಗಳ ಟಿ -20 ಸರಣಿ ಆರಂಭವಾಗಲಿದೆ. ಎಲ್ಲ ಪಂದ್ಯಗಳು ಎಂದಿನಂತೆ ಜೈವಿಕ ಸುರಕ್ಷಿತ ವಾತಾವರಣದಲ್ಲೇ ನಡೆಯಲಿದೆ.
ಈಗಾಗಲೆ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2 ಪಂದ್ಯಗಳು ಮುಗಿದಿವೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಜಯ ಸಾಧಿಸಿದರೆ, ಎರಡನೇ ಪಂದ್ಯ ಮಳೆಗಾಹುತಿಯಾಗಿ ಡ್ರಾನಲ್ಲಿ ಅಂತ್ಯಗೊಂಡಿತು. ಮೂರನೇ ಪಂದ್ಯ ಆಗಸ್ಟ್ 21 ರಂದು ಸೌತಾಂಪ್ಟನ್ನಲ್ಲಿ ನಡೆಯಲಿದೆ. ಆಗಸ್ಟ್ 28 ರಿಂದ ಟಿ-20 ಸರಣಿ ಆರಂಭವಾಗಲಿದ್ದು, ಅದಕ್ಕಾಗಿ ಇಸಿಬಿ 14 ಸದಸ್ಯರ ತಂಡವನ್ನು ಪ್ರಕಟಿಸಿದೆ.
ಇಯಾನ್ ಮಾರ್ಗನ್ ನಾಯಕನಾಗಿದ್ದು, ಐರ್ಲೆಂಡ್ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಇದ್ದ ಆಟಗಾರರೇ ಪಾಕ್ ವಿರುದ್ಧದ ಸರಣಿಯಲ್ಲೂ ಅವಕಾಶ ಪಡೆದಿದ್ದಾರೆ. ಇಸಿಬಿ ಘೋಷಣೆಯಂತೆ ಆಲ್ರೌಂಡರ್ ಲಿಯಾಮ್ ಡೇವ್ಸನ್ ಮತ್ತು ಜೇಮ್ಸ್ ವಿನ್ಸ್ 2020ರ ಆವೃತ್ತಿಯಿಂದ ಹೊರಬಿದ್ದಿದ್ದಾರೆ.
"ಪಾಕಿಸ್ತಾನದ ವಿರುದ್ಧ ಜೈವಿಕ ಸುರಕ್ಷಿತ ವಾತಾವರಣದಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿ ಆಡುತ್ತಿರುವ ಯಾವೊಬ್ಬ ಆಟಗಾರನನ್ನೂ ಟಿ-20 ತಂಡಕ್ಕೆ ಸೇರಿಸಿಲ್ಲ. ಟಿ-20 ಸರಣಿ ಕೊನೆಯ ಟೆಸ್ಟ್ ಸರಣಿಯಾಡಿದ 3 ದಿನಗಳಲ್ಲಿ ಆರಂಭವಾಗುವುದರಿಂದ ಮೂರೂ ಮಾದರಿಯಲ್ಲಿ ಆಡುವ ಕೆಲವು ಆಟಗಾರರಿಗೆ ವಿಶ್ರಾಂತಿ ನೀಡಲು ಬಯಸಲಾಗಿದೆ. ಆಸ್ಟ್ರೇಲಿಯಾ ಟಿ-20 ಸರಣಿಯ ತಂಡವನ್ನು ನಾವು ನಂತರದ ದಿನಗಳಲ್ಲಿ ಪ್ರಕಟಿಸುತ್ತೇವೆ ಎಂದು ರಾಷ್ಟ್ರೀಯ ಆಯ್ಕೆಗಾರ ಎಡ್ ಸ್ಮಿತ್ ತಿಳಿಸಿದ್ದಾರೆ.
ಇಂಗ್ಲೆಂಡ್ ತಂಡ:
ಇಯಾನ್ ಮಾರ್ಗನ್, ಮೊಯಿನ್ ಅಲಿ, ಜಾನಿ ಬೈರ್‌ಸ್ಟೋವ್, ಟಾಮ್ ಬಾಂಟನ್, ಸ್ಯಾಮ್ ಬಿಲ್ಲಿಂಗ್ಸ್, ಟಾಮ್ ಕರ್ರನ್, ಜೋ ಡೆನ್ಲಿ, ಲೆವಿಸ್ ಗ್ರೆಗೋರಿ, ಕ್ರಿಸ್ ಜೊರ್ಡಾನ್, ಸಕೀಬ್ ಮಹ್ಮೂದ್, ಡೇವಿಡ್ ಮಲನ್, ಆದಿಲ್ ರಶೀದ್, ಜೇಸನ್ ರಾಯ್, ಡೇವಿಡ್ ವಿಲ್ಲಿ