ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದಿರುವುದಕ್ಕೆ ಭಾರತ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ತಂಡದ ಕಠಿಣ ಪರಿಶ್ರಮ ಮತ್ತು ತಂಡದ ಸಂಘಟಿತ ಪ್ರದರ್ಶನ ಸ್ಪೂರ್ತಿದಾಯಕವಾಗಿದೆ ಎಂದು ಹೇಳಿದ್ದಾರೆ.
"ಈ ತಿಂಗಳು, ನಮಗೆ ಕ್ರಿಕೆಟ್ ಪಿಚ್‌ನಿಂದ ಒಳ್ಳೆಯ ಸುದ್ದಿ ಸಿಕ್ಕಿತು. ಆರಂಭಿಕ ಹಿನ್ನಡೆಯ ನಂತರ ಭಾರತ ತಂಡವು ವೈಭವಯುತವಾಗಿ ಪುಟಿದೇಳುವ ಮೂಲಕ ಆಸ್ಟ್ರೇಲಿಯಾದಲ್ಲಿ ಸರಣಿ ಗೆದ್ದಿದೆ. ಈ ನಮ್ಮ ತಂಡದ ಕಠಿಣ ಪರಿಶ್ರಮ ಮತ್ತು ಸಂಘಟಿತ ಹೋರಾಟ ಸ್ಪೂರ್ತಿದಾಯಕ" ಎಂದು ಪಿಎಂ ಮೋದಿ 'ಮನ್ ಕಿ ಬಾತ್' ಕಾರ್ಯಕ್ರಮದ ವೇಳೆ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರು ಮೆಚ್ಚುಗೆ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ," ನಿಮ್ಮ ಮೆಚ್ಚುಗೆ ಮತ್ತು ಪ್ರೋತ್ಸಾಹದಾಯಕ ಮಾತುಗಳಿಗೆ ಧನ್ಯವಾದ ಶ್ರೀ ನರೇಂದ್ರ ಮೋದಿ ಜೀ. ಭಾರತದ ತ್ರಿವರ್ಣ ಧ್ವಜವನ್ನು ಇನ್ನು ಎತ್ತರದಲ್ಲಿರಿಸಲು ಟೀಂ ಇಂಡಿಯಾ ಸಾಧ್ಯವಿರುವ ಎಲ್ಲವನ್ನೂ ಮಾಡಲಿದೆ " ಎಂದು ತಿಳಿಸಿದೆ.
ಜನವರಿ 19ರಂದು, ಭಾರತ ತಂಡ ಆಸ್ಟ್ರೇಲಿಯಾದ ಭದ್ರಕೋಟೆ ಎಂದೇ ಬಿಂಬಿತವಾಗಿದ್ದ ಗಬ್ಬಾದಲ್ಲಿ 32 ವರ್ಷಗಳ ನಂತರ ಮಣಿಸಿತ್ತು. ಈ ಪಂದ್ಯವನ್ನು 3 ವಿಕೆಟ್ಗಳಿಂದ ಜಯಿಸಿದ್ದ ಟೀಂ ಇಂಡಿಯಾ ಸತತ 2ನೇ ಬಾರಿಗೆ ಆಸ್ಟ್ರೇಲಿಯಾದಲ್ಲಿ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಈ ಮೈದಾನದಲ್ಲಿ ಆಸ್ಟ್ರೇಲಿಯಾ 1988ರಲ್ಲಿ ಕೊನೆಯ ಬಾರಿಗೆ ವಿವಿಯನ್ ರಿಚರ್ಡ್ಸನ್ ನಾಯಕತ್ವದಲ್ಲಿ ಸೋಲು ಕಂಡಿತ್ತು.