ಮುಂಬೈ: ಯುವ ವಿಕೆಟ್ ಕೀಪರ್ ರಿಷಭ್ ಪಂತ್ರೊಂದಿಗೆ ತಮ್ಮನ್ನು ಹೋಲಿಕೆ ಮಾಡುವುದರ ಬಗ್ಗೆ ಯಾವುದೇ ಚಿಂತೆಯಿಲ್ಲ, ನಮ್ಮಿಬ್ಬರಲ್ಲಿ ಯಾರಿಗೆ ಅವಕಾಶ ನೀಡಬೇಕೆಂಬುದನ್ನು ಟೀಂ ಮ್ಯಾನೇಜ್ಮೆಂಟ್ ನಿರ್ಧರಿಸಲಿದೆ ಎಂದು ಭಾರತ ತಂಡದ ಅನುಭವಿ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ತಿಳಿಸಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಕೊನೆಯ ಮೂರು ಪಂದ್ಯಗಳಲ್ಲಿ ಟೀಂ ಮ್ಯಾನೇಜ್ಮೆಂಟ್ ಸಹಾ ಬದಲು ಪಂತ್ಗೆ ಅವಕಾಶ ನೀಡಿತ್ತು. ಪಂತ್ ಕೀಪಿಂಗ್ನಲ್ಲಿ ಕೆಲವು ಟೀಕೆಗಳನ್ನು ಎದುರಿಸಿದರೂ, ಬ್ಯಾಟಿಂಗ್ನಲ್ಲಿ ಎರಡು ಅರ್ಧಶತಕ ಸಿಡಿಸಿ ಸರಣಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅದರಲ್ಲೂ ಸರಣಿ ನಿರ್ಣಾಯಕವಾಗಿದ್ದ ಬ್ರಿಸ್ಬೇನ್ ಟೆಸ್ಟ್ನಲ್ಲಿ ಆಕರ್ಷಕ 89 ರನ್ ಸಿಡಿಸಿ ಐತಿಹಾಸಿಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ತಮ್ಮ ಹಾಗೂ ಪಂತ್ ಜೊತೆಗಿನ ಹೋಲಿಕೆ ಬಗ್ಗೆ ಮಾತನಾಡಿದ ಸಹಾ, "ಪಂತ್ ಮತ್ತು ನನ್ನನ್ನು ಕಳೆದ ಎರಡು ವರ್ಷಗಳಿಂದಲೂ ಹೋಲಿಕೆ ಮಾಡುವುದನ್ನು ನಾನು ಕೇಳುತ್ತಿದ್ದೇನೆ. ಆದರೆ ನಾನು ಮಾಡುವ ಕೆಲಸದಲ್ಲಿ ನಂಬಿಕೆಯಿಟ್ಟಿದ್ದೇನೆ. ಹಾಗಾಗಿ ಪಂತ್ ಬ್ಯಾಟಿಂಗ್ ಬಗ್ಗೆ ಚಿಂತಿಸುವುದಿಲ್ಲ" ಎಂದಿದ್ದಾರೆ.