ನವದೆಹಲಿ:ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಡೀ ವಿಶ್ವದ ಗಮನ ಸೆಳೆದಿದ್ದ ಟೀಂ ಇಂಡಿಯಾ ಅಭಿಮಾನಿ 87 ವರ್ಷದ ಚಾರುಲತಾ ಪಟೇಲ್ ಸೋಮವಾರ ಕೊನೆಯುಸಿರೆಳೆದಿದ್ದಾರೆ.
ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಭಾರತ- ಬಾಂಗ್ಲಾ ನಡುವಿನ ಪಂದ್ಯದ ವೇಳೆ ಮೈದಾನದಲ್ಲಿ ಕಾಣಿಸಿಕೊಂಡಿದ್ದ ಚಾರುಲತಾ ಪಟೇಲ್ ಇಳಿ ವಯಸ್ಸಿನಲ್ಲೂ ಟೀಂ ಇಂಡಿಯಾವನ್ನ ಚಿಯರ್ ಮಾಡಿ ಎಲ್ಲರ ಗಮನ ಸೆಳೆದಿದ್ದರು.
ಪಂದ್ಯದ ನಂತರ ನಾಯಕ ಕೊಹ್ಲಿ ಹಾಗೂ ಪಂದ್ಯ ಶ್ರೇಷ್ಠ ರೋಹಿತ್ ಶರ್ಮಾ ಚಾರುಲತಾ ಅವರನ್ನು ಭೇಟಿ ಮಾಡಿ ಮಾತನಾಡಿದ್ದರು. ಇವರಿಬ್ಬರನ್ನು ಅಪ್ಪಿಕೊಂಡಿದ್ದ ಅಜ್ಜಿ, ಸಂತೋಷದಿಂದ ಇಬ್ಬರಿಗೂ ಮುತ್ತು ನೀಡಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿ ವಿಶ್ವಕಪ್ ಜಯಿಸುವಂತೆ ಆಶೀರ್ವದಿಸಿದ್ದರು.
ಚಾರುಲತಾ ಪಟೇಲ್ ಸಾವಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಂತಾಪ ಸೂಚಿಸಿದೆ. ಟೀಂ ಇಂಡಿಯಾ ಸೂಪರ್ ಫ್ಯಾನ್ ಚಾರುಲತಾ ಪಟೇಲ್ ಎಂದಿಗೂ ನಮ್ಮ ಹೃದಯದಲ್ಲಿ ನೆಲೆಸಿರುತ್ತಾರೆ. ಅವರಿಗೆ ಕ್ರಿಕೆಟ್ ಮೇಲಿದ್ದ ಅಭಿಮಾನ ನಮಗೆ ಸ್ಫೂರ್ತಿ ತುಂಬುತ್ತದೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದಿದೆ.