ಅಹ್ಮದಾಬಾದ್:ಹಿಮಾಚಲ ಪ್ರದೇಶದ ವಿರುದ್ಧ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದ ತಮಿಳುನಾಡು ತಂಡ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಸತತ ಎರಡನೇ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದೆ.
ಅಹ್ಮದಾಬಾದ್ನ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ನಡೆದ 2ನೇ ಕ್ವಾರ್ಟರ್ ಫೈನಲ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹಿಮಾಚಲ ಪ್ರದೇಶ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 135 ರನ್ಗಳಿಸಿತ್ತು. ನಾಯಕ ರಿಷಿ ಧವನ್ 35, ನಿತಿನ್ ಶರ್ಮಾ 26, ಅಭಿಮನ್ಯು ರಾಣ 28 ರನ್ಗಳಸಿದ್ದರು.
ತಮಿಳುನಾಡು ಪರ ಸೋನು ಯಾದವ್ 14ಕ್ಕೆ 3, ಸಂದೀಪ್ ವಾರಿಯರ್ 32ಕ್ಕೆ 2, ಸಾಯಿ ಕಿಶೋರ್ ಮತ್ತು ಎಂ.ಮೊಹಮ್ಮದ್ ತಲಾ ಒಂದು ವಿಕೆಟ್ ಪಡೆದು ಎದುರಾಳಿನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದರು.
ಇನ್ನು 136 ರನ್ಗಳ ಸುಲಭ ಗುರಿ ಬೆನ್ನತ್ತಿದ ತಮಿಳುನಾಡು ತಂಡ 25 ರನ್ಗಳಾಗುವಷ್ಟರಲ್ಲಿ ಎನ್. ಜಗದೀಶನ್ (7), ಹರಿ ನಿಶಾಂತ್(17) ಹಾಗೂ ಅರುಣ್ ಕಾರ್ತಿಕ್(0) ವೈಭವ್ ಅರೋರಾ ಬೌಲಿಂಗ್ನಲ್ಲಿ ಬೌಲ್ಡ್ ಆದರು.
ನಂತರ ಬಾಬಾ ಅಪರಾಜಿತ್ ಮತ್ತು ಸೋನು ಯಾದವ್(16) 4ನೇ ವಿಕೆಟ್ಗೆ 35 ರನ್ ಸೇರಿಸಿ ಚೇತರಿಕೆ ನೀಡಿದರು. ಈ ಹಂತದಲ್ಲಿ ಸೋನು ಯಾದವ್ ಮತ್ತು ದಿನೇಶ್ ಕಾರ್ತಿಕ್(2)ನ ಔಟಾದರು.
66ಕ್ಕೆ 5 ವಿಕೆಟ್ ಕಳೆದುಕೊಂಡು ಸೋಲಿನತ್ತ ಸಾಗುತ್ತಿದ್ದ ಸಂದರ್ಭದಲ್ಲಿ ಬಾಬಾ ಅಪರಾಜಿತ್ ಜೊತೆಗೂಡಿದ ಶಾರುಕ್ ಖಾನ್ 6ನೇ ವಿಕೆಟ್ಗೆ 68 ರನ್ಗಳ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನ ದಡ ದಾಟಿಸಿದರು.
ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ತೋರಿದ ಅಪರಾಜಿತ್ 45 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಸಹಿತ ಅಜೇಯ 52 ರನ್ಗಳಿಸಿದರೆ, ಶಾರುಕ್ ಕೇವಲ 19 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 40 ರನ್ಗಳಿಸಿ ಗೆಲುವಿನ ರೂವಾರಿಯಾದರು.
ದಿನೇಶ್ ಕಾರ್ತಿಕ್ ಪಡೆ ನಾಳೆ ನಡೆಯುವ ಬಿಹಾರ ಮತ್ತು ರಾಜಸ್ಥಾನ ನಡುವಿನ 4ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗೆದ್ದ ತಂಡವನ್ನು ಶುಕ್ರವಾರ ನಡೆಯುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಎದುರಿಸಲಿದೆ.
ಇದನ್ನು ಓದಿ:ಮುಷ್ತಾಕ್ ಅಲಿ ಟ್ರೋಫಿ: ಕರ್ನಾಟಕ ಮಣಿಸಿ ಸೆಮೀಸ್ಗೆ ಎಂಟ್ರಿ ಕೊಟ್ಟ ಪಂಜಾಬ್