ಅಹ್ಮದಾಬಾದ್:ಸಯ್ಯದ್ ಮುಷ್ತಾಕ್ ಅಲಿ ಟಿ-20 ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ರಾಜಸ್ಥಾನದ ಮೇಲೆ ಸವಾರಿ ನಡೆಸಿದ ತಮಿಳುನಾಡು ಫೈನಲ್ಗೆ ಲಗ್ಗೆ ಹಾಕಿದೆ.
ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ಥಾನ ತಂಡ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 154 ರನ್ ಗಳಿಸಿತು. ತಂಡದ ಪರ ಕ್ಯಾಪ್ಟನ್ ಮಿನಾರೈ(51), ಗುಪ್ತಾ(45)ರನ್ ಗಳಿಸಿದರು.
ತಮಿಳುನಾಡು ತಂಡದ ಪರ ಮಾರಕ ಬೌಲಿಂಗ್ ಪ್ರದರ್ಶನ ತೋರಿದ ಮೊಹಮ್ಮದ್ 4 ವಿಕೆಟ್, ಸಾಯಿ ಕಿಶೋರ್ 2 ಹಾಗೂ ಸೋನು ಯಾದವ್, ಅರ್ಪಜಿತ್ ಹಾಗೂ ಅಶ್ವಿನ್ ತಲಾ 1 ವಿಕೆಟ್ ಪಡೆದುಕೊಂಡರು.
155 ರನ್ಗಳ ಗುರಿ ಬೆನ್ನತ್ತಿದ್ದ ತಮಿಳುನಾಡು ತಂಡ ಆರಂಭದಲ್ಲೇ ಹರಿ ನಿಶಾಂತ್(4) ವಿಕೆಟ್ ಕಳೆದುಕೊಳ್ತು. ಆದರೆ ಈ ವೇಳೆ ಒಂದಾದ ಜಗದೀಶನ್(28) ಹಾಗೂ ಅರುಣ್ ಕಾರ್ತಿಕ್(89) ತಂಡವನ್ನು ಗೆಲುವಿನತ್ತ ತೆಗೆದುಕೊಂಡು ಹೋದರು. ಅರುಣ್ ಕಾರ್ತಿಕ್ 54 ಎಸೆತಗಳಲ್ಲಿ ಬರೋಬ್ಬರಿ ಅಜೇಯ 89 ರನ್ ಗಳಿಸಿದ್ರೆ, ಕ್ಯಾಪ್ಟನ್ ಕಾರ್ತಿಕ್ ಅಜೇಯ 26 ರನ್ ಗಳಿಸಿ ತಂಡ ಗೆಲ್ಲುವಂತೆ ಮಾಡಿದರು.
ತಮಿಳುನಾಡು ತಂಡ 18.4 ಓವರ್ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 158 ರನ್ ಗಳಿಸಿ ಸತತ ಎರಡನೇ ಸಲ ಫೈನಲ್ಗೆ ಲಗ್ಗೆ ಹಾಕಿದೆ. ಮತ್ತೊಂದು ಪಂದ್ಯದಲ್ಲಿ ಪಂಜಾಬ್-ಬರೋಡಾ ಮುಖಾಮುಖಿಯಾಗಿವೆ.
ಸ್ಕೋರ್ ವಿವರ: ತಮಿಳುನಾಡು (158/3 18.4 ಓವರ್), ರಾಜಸ್ಥಾನ 154/9 20 ಓವರ್)