ಪರ್ತ್: ಮಹಿಳಾ ಟಿ20 ವಿಶ್ವಕಪ್ನ 4ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವನಿತೆಯರ ತಂಡ ಇಂಗ್ಲೆಂಡ್ ವಿರುದ್ಧ 6 ವಿಕೆಟ್ಗಳ ಜಯ ಸಾಧಿಸಿ ಏಕದಿನ ಕ್ರಿಕೆಟ್ ಚಾಂಪಿಯನ್ ತಂಡಕ್ಕೆ ಶಾಕ್ ನೀಡಿದೆ.
ಕೊನೆಯ ಓವರ್ವರೆಗೂ ಕುತೂಹಲ ಕೆರಳಿಸಿದ್ದ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಈ ಕದನದಲ್ಲಿ ಹರಿಣಗಳ ಪಡೆ ಗೆದ್ದು ಸಂಭ್ರಮಿಸಿದೆ.
ಇಂಗ್ಲೆಂಡ್ ನೀಡಿದ 124 ರನ್ಗಳ ಸಾಧಾರಣ ಗುರಿ ಬೆನ್ನತ್ತಿದ ಹರಿಣ ಪಡೆಗೆ ಆರಂಭದಲ್ಲಿ ಸ್ಫೋಟಕ ಆಟಗಾರ್ತಿ ಲಿಜೆಲ್ಲೆ ಲೀ(4) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು.
ಆದರೆ ನಾಯಕಿ ಡೇನ್ ವ್ಯಾನ್ ನೀಕೆರ್ಕ್ ಎರಡನೇ ವಿಕೆಟ್ಗೆ ಆಲ್ರೌಂಡರ್ ಮರಿಝಾನ್ನೆ ಕಾಪ್ ಜೊತೆ 84 ರನ್ಗಳ ಜೊತೆಯಾಟ ನೀಡಿ ತಂಡವನ್ನು ಗೆಲುವಿನ ಸನಿಹ ತಂದರು. ಆದರೆ ಒಂದು ಓವರ್ಗಳ ಅಂತರದಲ್ಲಿ 51 ಎಸೆತಗಳಲ್ಲಿ ತಲಾ ಎರಡು ಬೌಂಡರಿ ಹಾಗೂ ಸಿಕ್ಸರ್ ಸಹಿತ 46 ರನ್ ಗಳಿಸಿದ್ದ ನೀಕೆರ್ಕ್ ಹಾಗೂ, 33 ಎಸೆತಗಳಲ್ಲಿ 6 ಬೌಂಡರಿ ಸಹಿತ 38 ರನ್ ಗಳಿಸಿದ್ದ ಕಾಪ್ ಔಟಾಗಿ ಪೆವಿಲಿಯನ್ ಸೇರಿಕೊಂಡರು.