ರಾಜ್ಕೋಟ್: ಭಾರತ ತಂಡ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ನಲ್ಲಿ ವಿಶ್ವದ ಬಲಿಷ್ಠ ತಂಡವಾಗಿದೆ. ಆದ್ರೆ ಟಿ20 ಯಲ್ಲಿ ಮಾತ್ರ ಹಿನ್ನಡೆ ಅನುಭವಿಸುತ್ತಿದೆ. ಇದಕ್ಕೆ ಕಾರಣವೇನು ಎಂಬುದನ್ನು ನಾಯಕ ರೋಹಿತ್ ಶರ್ಮಾ ತಿಳಿಸಿದ್ದಾರೆ.
ಭಾರತ ಕ್ರಿಕೆಟ್ ತಂಡ ಕೊನೆಯ ಬಾರಿಗೆ 2018ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 3-0ಯಲ್ಲಿ ಸರಣಿ ಜಯಿಸಿತ್ತು. ನಂತರ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ 2-0 ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ 1-1 ರಲ್ಲಿ ಸಮಬಲ ಸಾಧಿಸಿತ್ತು. ಇದೀಗ ಪ್ರಸ್ತುತ ಸರಣಿಯಲ್ಲಿ 0-1ರಲ್ಲಿ ಬಾಂಗ್ಲಾ ವಿರುದ್ಧ ಸರಣಿ ಹಿನ್ನಡೆ ಅನುಭವಿಸಿದೆ.
ಈ ಕುರಿತು ಮಾತನಾಡಿರುವ ರೋಹಿತ್ ಶರ್ಮಾ, ಟಿ20 ಕ್ರಿಕೆಟ್ನಲ್ಲಿ ನಮ್ಮ ಖಾಯಂ ತಂಡ ಆಡುತ್ತಿಲ್ಲ, ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ ಯುವ ಆಟಗಾರರಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಇದು ನಮ್ಮ ಟಿ20 ಕ್ರಿಕೆಟ್ನ ಹಿನ್ನಡೆಗೆ ಕಾರಣವಾಗಿದೆ. ಆದರೆ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ನಲ್ಲಿ ಮಾತ್ರ ನಮ್ಮ ಪೂರ್ಣ ತಂಡ ಆಡುವುದರಿಂದ ಯಶಸ್ಸು ಮುಂದುವರಿಯುತ್ತಿದೆ ಎಂದಿದ್ದಾರೆ.
ಆದರೆ ಯುವ ಆಟಗಾರರಿಗೆ ಚುಟುಕು ಕ್ರಿಕೆಟ್ನಲ್ಲಿ ಅವಕಾಶ ಕಲ್ಪಿಸುವುದರಿಂದ ಅವರೂ ಸಹ ತಮ್ಮ ಪ್ರದರ್ಶನವನ್ನು ತೋರಿಸುವ ಮೂಲಕ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ಗೆ ಸಿದ್ಧರಾಗಲು ಅನುಕೂಲಕರವಾಗಲಿದೆ ಎಂದು ರೋಹಿತ್ ಅಭಿಪ್ರಾಯಪಟ್ಟಿದ್ದಾರೆ.
ನಮಗೆ ಬೆಂಚ್ ಸ್ಟ್ರೆಂತ್ ಬಲಿಷ್ಠಗೊಳಿಸಲು ಅನೇಕ ಯುವ ಆಟಗಾರರಿಗೆ ಅವಕಾಶ ಕಲ್ಪಿಸಿಕೊಡುತ್ತಿದ್ದೇವೆ. ಆದರೆ ನಮ್ಮ ಸೋಲಿಗೆ ಇದೊಂದು ಕಾರಣ ಎನ್ನಲಾಗದು. ನಾವು ಗೆಲ್ಲಬೇಕಾಗಿದೆ, ಅದೇ ನಮ್ಮ ಪ್ರಮುಖ ಆದ್ಯತೆ. ನಾನೂ ಸೇರಿದಂತೆ ಮೊದಲು ಟಿ20 ಆಡುವ ಯುವ ಆಟಗಾರರು ಹಲವು ಪಾಠಗಳನ್ನು ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ ಆಡುವ ಮುನ್ನ ಕಲಿಯಬೇಕಿದೆ ಎಂದು ಹಿಟ್ಮ್ಯಾನ್ ತಿಳಿಸಿದ್ದಾರೆ.