ಹೈದರಾಬಾದ್: ನಾಯಕ ಕೃನಾಲ್ ಪಾಂಡ್ಯ ಅವರೊಂದಿಗಿನ ವಾಗ್ವಾದದ ನಂತರ ಬರೋಡಾ ಕ್ರಿಕೆಟ್ ತಂಡಕ್ಕೆ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಒಂದು ದಿನ ಮೊದಲು ಆಘಾತ ಎದುರಾಗಿದ್ದು, ದೀಪಕ್ ಹೂಡಾ ತಂಡದಿಂದ ಹೊರ ನಡೆದಿದ್ದಾರೆ.
ಬರೋಡಾ ಕ್ರಿಕೆಟ್ ಅಸೋಸಿಯೇಷನ್‌ಗೆ ಬರೆದ ಪತ್ರವೊಂದರಲ್ಲಿ ತಂಡದ ಪರ 46 ಪ್ರಥಮ ದರ್ಜೆ, 123 ಟಿ-20 ಪಂದ್ಯಗಳಲ್ಲಿ ಕಾಣಿಸಿಕೊಂಡಿರುವ ಹುಡಾ, ರಿಲಯನ್ಸ್ ಸ್ಟೇಡಿಯಂನಲ್ಲಿ ನಡೆದ ಅಭ್ಯಾಸದ ಅವಧಿಯಲ್ಲಿ ಕೃನಾಲ್ ಪಾಂಡ್ಯ ನನ್ನನ್ನು 'ನಿಂದಿಸಿದ್ದಾರೆ' ಎಂದು ಹೇಳಿದ್ದಾರೆ.
"ನಾನು ಬರೋಡಾ ಕ್ರಿಕೆಟ್ ಅಸೋಸಿಯೇಷನ್ ಪರ ಕಳೆದ 11 ವರ್ಷಗಳಿಂದ ಕ್ರಿಕೆಟ್ ಆಡುತ್ತಿದ್ದೇನೆ. ಪ್ರಸ್ತುತ, ನಾನು ಸೈಯದ್ ಮುಷ್ತಾಕ್ ಅಲಿ ಟ್ರೋಫಿಗೆ ಆಯ್ಕೆಯಾಗಿದ್ದೇನೆ. ನಾನು ನಿರಾಶೆಗೊಂಡಿದ್ದೇನೆ, ಖಿನ್ನತೆಗೆ ಒಳಗಾಗಿದ್ದೇನೆ ಮತ್ತು ಒತ್ತಡದಲ್ಲಿದ್ದೇನೆ. ಕಳೆದ ಕೆಲವು ದಿನಗಳಿಂದ ಮತ್ತು ಕಳೆದ ಎರಡು ದಿನಗಳಿಂದ, ನನ್ನ ತಂಡದ ನಾಯಕ ಕೃನಾಲ್ ಪಾಂಡ್ಯ ನನ್ನ ತಂಡದ ಸದಸ್ಯರು ಮತ್ತು ರಿಲಯನ್ಸ್ ಸ್ಟೇಡಿಯಂ ವಡೋದರಾದಲ್ಲಿ ಭಾಗವಹಿಸಲು ಬಂದ ಇತರ ರಾಜ್ಯಗಳ ತಂಡಗಳ ಮುಂದೆ ನನಗೆ ನಿಂದನೀಯ ಭಾಷೆ ಬಳಸುತ್ತಿದ್ದಾರೆ" ಎಂದು ಹೂಡಾ ಪತ್ರದಲ್ಲಿ ಬರೆದಿದ್ದಾರೆ.
ತರಬೇತಿ ಅವಧಿಯಲ್ಲಿ ಹೂಡಾ ಮತ್ತು ಕೃನಾಲ್ ಅವರು ತೀವ್ರ ವಾಗ್ವಾದಕ್ಕಿಳಿದಿದ್ದಾರೆ ಎನ್ನಲಾಗಿದೆ, "ನಾನು ನೆಟ್‌ಗಳಲ್ಲಿ ಅಭ್ಯಾಸ ಮಾಡುತ್ತಿದ್ದೆ ಮತ್ತು ಮುಖ್ಯ ತರಬೇತುದಾರ ಪ್ರಭಾಕರ್ ಅವರ ಅನುಮತಿಯೊಂದಿಗೆ ನಾಳಿನ ಆಟಕ್ಕೆ ನನ್ನ ತಯಾರಿ ಮಾಡುತ್ತಿದ್ದೆ. ಕೃನಾಲ್ ನೆಟ್ನಲ್ಲಿ ಬಂದು ನನ್ನೊಂದಿಗೆ ಕೆಟ್ಟದಾಗಿ ವರ್ತಿಸಲು ಪ್ರಾರಂಭಿಸಿದರು. ಮುಖ್ಯ ತರಬೇತುದಾರರ ಅನುಮತಿಯೊಂದಿಗೆ ನಾನು ತಯಾರಿಯನ್ನು ಮಾಡುತ್ತಿದ್ದೇನೆ ಎಂದು ಅವರಿಗೆ ಹೇಳಿದೆ. ಆದರೆ ಅವರು ‘ನಾನು ಕ್ಯಾಪ್ಟನ್, ಮುಖ್ಯ ಕೋಚ್ ಯಾರು? ನಾನೇ ಬರೋಡಾ ತಂಡ ಎಂದರು." ಎಂದು ಹೂಡಾ ಆರೋಪಿಸಿದ್ದಾರೆ.