ಅಬುಧಾಬಿ:ಅನುಮಾನಾಸ್ಪದ ಬೌಲಿಂಗ್ ಶೈಲಿ ಆರೋಪ ಹೊತ್ತಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆಲ್ರೌಂಡರ್ ಸುನೀಲ್ ನರೈನ್ ಇದೀಗ ನಿರಾಳರಾಗಿದ್ದಾರೆ.
ಐಪಿಎಲ್ನ ಸಂಶಯಾಸ್ಪದ ಬೌಲಿಂಗ್ ಶೈಲಿ ಪರಿಶೀಲನಾ ಸಮಿತಿ ನರೈನ್ ಬೌಲಿಂಗ್ ಸರಿಯಿದೆ ಎಂದು ತಿಳಿಸಿ ಹೇಳಿಕೆ ಬಿಡುಗಡೆ ಮಾಡಿದ್ದು, ಮುಂದಿನ ಪಂದ್ಯಗಳಿಗೆ ಅವರು ಲಭ್ಯರಾಗಲಿದ್ದಾರೆ.
ಅಬುಧಾಬಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ವಿರುದ್ಧ ಸುನೀಲ್ ನರೈನ್ ಬೌಲಿಂಗ್ ಶೈಲಿ ಅಕ್ರಮ ಎಂದು ಮೈದಾನದ ಅಂಪೈರ್ ವರದಿ ನೀಡಿದ್ದರು. ಇದೀಗ ಅವರ ಬೌಲಿಂಗ್ ಶೈಲಿಯನ್ನು ಪರಿಶೀಲಿಸಿರುವ ಐಪಿಎಲ್ ಸಮಿತಿ, ಕೆಕೆಆರ್ ಪ್ರಧಾನ ಸ್ಪಿನ್ನರ್ ಬೌಲಿಂಗ್ ಕ್ರಮಬದ್ಧವಾಗಿದೆ ಎಂದು ತಿಳಿಸಿದೆ.
ನರೈನ್ ಸ್ಲೋ ಮೋಷನ್ ಬೌಲಿಂಗ್ ವಿಡಿಯೋವನ್ನು ಕಳುಹಿಸಿದ್ದ ಕೆಕೆಆರ್, ಬೌಲಿಂಗ್ ಶೈಲಿಯನ್ನು ಪರಿಶೀಲಿಸುವಂತೆ ಐಪಿಎಲ್ ಪರಿಶೀಲನಾ ಸಮಿತಿಗೆ ಮನವಿ ಮಾಡಿತ್ತು. ಇದೀಗ ಆ ವಿಡಿಯೋ ಪರಿಶೀಲಿಸಿರುವ ಸಮಿತಿ "ನರೈನ್ ಅವರ ಬೌಲಿಂಗ್ ವಿಧಾನವನ್ನು ಎಲ್ಲಾ ಆಯಾಮಗಳಿಂದಲೂ ಪರಿಶೀಲಿಸಲಾಗಿದೆ. ಅವರ ಶೈಲಿ ಅನುಮತಿ ನೀಡಿದ ಪರಿಧಿಯೊಳಗಿದೆ" ಎಂದು ಸ್ಪಷ್ಟಪಡಿಸಿದೆ.
ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಕೇವಲ 2 ರನ್ಗಳ ಅಂತರದಿಂದ ಗೆದ್ದ ನಂತರ ಪಂದ್ಯದ ಅಧಿಕಾರಿಗಳ ದೂರಿನಿಂದ ಬೌಲರ್ ವಿರುದ್ಧ ಆರೋಪ ಮಾಡಿದ್ದು, ಶ್ರೇಷ್ಠ ಸ್ಪಿನ್ನರ್ಗೆ ಹಾಗೂ ಕೆಕೆಆರ್ ಫ್ರಾಂಚೈಸಿಗೆ ಬೇಸರ ತಂದಿತ್ತು. ನಂತರ ಮೂರು ಪಂದ್ಯಗಳಿಂದ ನರೈನ್ರನ್ನು ಹೊರಗಿಟ್ಟು ಆರೋಪ ಮುಕ್ತಗೊಳಿಸಲು ಬಯಸಿತ್ತು. ಇದೀಗ ನರೈನ್ ಬೌಲಿಂಗ್ ಶೈಲಿಯ ಮೇಲಿದ್ದ ಅಕ್ರಮ ಕಳಂಕ ಕಳಚಿಬಿದ್ದಿದ್ದು, ಐಪಿಎಲ್ನ ಮುಂದಿನ ಪಂದ್ಯಗಳಲ್ಲಿ ಕಣಕ್ಕಿಳಿಯಲಿದ್ದಾರೆ.