ಕ್ರೈಸ್ಟ್ ಚರ್ಚ್: ಮೊದಲ ಟೆಸ್ಟ್ ಪಂದ್ಯದ ಸೋಲು ಮರೆತು ಎರಡನೇ ಟೆಸ್ಟ್ನಲ್ಲಿ ತಂಡದ ಎಲ್ಲ ಆಟಗಾರರು ನಮ್ಮ ಸಾಮರ್ಥ್ಯ ನಂಬಿ ಕಣಕ್ಕಿಳಿಯಲಿದ್ದೇವೆ ಎಂದು ಭಾರತ ತಂಡದ ಉಪನಾಯಕ ಅಜಿಂಕ್ಯಾ ರಹಾನೆ ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವೆಲ್ಲಿಂಗ್ಟನ್ನಲ್ಲಿ ನ್ಯೂಜಿಲ್ಯಾಂಡ್ ಬೌಲರ್ಗಳು ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದರು. ಅವರ ಬೌಲಿಂಗ್ನಲ್ಲಿ ಹೆಚ್ಚು ಸ್ವಿಂಗ್ ಹಾಗೂ ಸೀಮ್ ಒಳಗೊಂಡಿತ್ತು. ಇದರಿಂದ ನಮ್ಮ ತಂಡದ ಬ್ಯಾಟ್ಸ್ಮನ್ಗಳಿಗೆ ರನ್ಗಳಿಸಲು ಸಾಧ್ಯವಾಗಲಿಲ್ಲ. ಮೊದಲ ಪಂದ್ಯದ ಸೋಲಿನಿಂದ ಪಾಠ ಕಲಿತಿದ್ದೇವೆ. ಎರಡನೇ ಪಂದ್ಯದಲ್ಲಿ ನಾನು, ಕೊಹ್ಲಿ ಹಾಗೂ ಪೂಜಾರ ಎಲ್ಲರೂ ನಮ್ಮ ಸಾಮರ್ಥ್ಯವನ್ನು ನಂಬಿ ಬ್ಯಾಟಿಂಗ್ ನಡೆಸಲಿದ್ದೇವೆ ಎಂದು ರಹಾನೆ ಹೇಳಿದ್ದಾರೆ.
ಈಗಾಗಲೆ ಭಾರತ ಎ ತಂಡ ಕ್ರೈಸ್ಟ್ ಚರ್ಚ್ನಲ್ಲಿ ಆಡಿದೆ. ಹನುಮ ವಿಹಾರಿ, ಶುಬ್ಮನ್ ಗಿಲ್ ಈ ಮೈದಾನದಲ್ಲಿ ಉತ್ತಮ ರನ್ಗಳಿಸಿದ್ದಾರೆ. ಅವರ ಪ್ರಕಾರ ಇಲ್ಲಿ ರನ್ಗಳಿಸುವುದು ಸುಲಭ. ಅಲ್ಲದೇ ಈ ಮೈದಾನದಲ್ಲಿ ಹೆಚ್ಚು ಸ್ವಿಂಗ್ ಆಗುವುದಿಲ್ಲ, ಬದಲಾಗಿ ಬೌನ್ಸ್ ಹಾಗೂ ವೇಗ ಹೆಚ್ಚಿರುತ್ತದೆ ಎಂದಿದ್ದಾರೆ.
ಇನ್ನು ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ ವೈಫಲ್ಯದ ಬಗ್ಗೆ ಮಾತನಾಡಿದ ಅವರು, ಪೂಜಾರ ಉತ್ತಮವಾಗಿ ಬ್ಯಾಟ್ ಬೀಸಿದರು. ಅವರು ರನ್ಗಳಿಸಲು ಪ್ರಯತ್ನಿಸುತ್ತಿದ್ದರು. ಆದರೆ, ಕಿವೀಸ್ ಬೌಲರ್ಗಳು ಸುಲಭವಾದ ಎಸೆತಗಳನ್ನು ಹಾಕುತ್ತಿರಲಿಲ್ಲ. ಒಮ್ಮೊಮ್ಮೆ ಎಲ್ಲ ಬ್ಯಾಟ್ಸ್ಮನ್ಗಳು ವೈಫಲ್ಯ ಅನುಭವಿಸುವುದು ಸಾಮಾನ್ಯ. ಈ ಪಂದ್ಯದಲ್ಲಿ ಗೆಲುವು ಸಾಧಿಸಿ 60 ಅಂಕಗಳನ್ನು ಪಡೆಯಲು ಪ್ರಯತ್ನಿಸುತ್ತೇವೆ. ಸರಣಿ ಗೆಲ್ಲಲು ಸಾಧ್ಯವಾಗದಿದ್ದರೂ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಒಂದೊಂದು ಪಂದ್ಯದ ಫಲಿತಾಂಶವು ಪ್ರಮುಖವಾಗಿರುತ್ತದೆ ಎಂದು ರಹಾನೆ ತಿಳಿಸಿದ್ದಾರೆ.
ಭಾರತ ತಂಡ ಮೊದಲ ಪಂದ್ಯದಲ್ಲಿ ಭಾರತ ತಂಡ 10 ವಿಕೆಟ್ಗಳಿಂದ ಸೋಲನುಭವಿಸಿತ್ತು. ಕೊಹ್ಲಿ ಪಡೆ ಎರಡೂ ಇನ್ನಿಂಗ್ಸ್ನಲ್ಲೂ 200 ರನ್ಗಳಿಸಲು ವಿಫಲರಾಗಿದ್ದರು.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಆಡಿರುವ 8 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಗೆದ್ದಿರುವ ಭಾರತ ತಂಡ ಕಿವೀಸ್ ವಿರುದ್ಧ ಮಾತ್ರ ಸೋಲುಕಂಡಿದೆ. ಭಾರತ ತಂಡ 360 ಅಂಕಗಳಿಸಿ ಮೊದಲ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ 10 ಪಂದ್ಯಗಳಲ್ಲಿ 7 ಗೆಲುವು, 2 ಸೋಲು, ಒಂದು ಡ್ರಾ ನೆರವಿನಿಂದ 296 ಅಂಕಗಳಿಸಿಕೊಂಡು 2ನೇ ಸ್ಥಾನದಲ್ಲಿದೆ.