ಎಡ್ಬಾಸ್ಟನ್:ಇಂಗ್ಲೆಂಡ್ ವಿರುದ್ಧ ಆ್ಯಶಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದ ಎರಡೂ ಇನ್ನಿಂಗ್ಸ್ಗಳಲ್ಲಿ ಶತಕ ದಾಖಲಿಸಿರುವ ಆಸಿಸ್ನ ಸ್ಟೀವ್ ಸ್ಮಿತ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿದಿದ್ದಾರೆ.
ಪಂದ್ಯದ ಎರಡೂ ಇನ್ನಿಂಗ್ಸ್ಗಳಲ್ಲಿ ತಲಾ 144 ಹಾಗೂ 142 ರನ್ ಬಾರಿಸಿದ ಸ್ಮಿತ್ ಟೆಸ್ಟ್ ಕ್ರಿಕೆಟ್ನಲ್ಲಿ 25 ಶತಕ ಗಳಿಸಿದ ಸಾಧನೆಗೈದರು. ಈ ಮೂಲಕ ವೇಗವಾಗಿ (119 ಇನ್ನಿಂಗ್ಸ್) 25 ಶತಕ ಪೂರೈಸಿದ ಎರಡನೇ ಆಟಗಾರ ಎಂಬ ಹೆಮ್ಮೆಗೆ ಪಾತ್ರರಾದರಲ್ಲದೆ, ವಿರಾಟ್ ಕೊಹ್ಲಿಯನ್ನು (127 ಇನ್ನಿಂಗ್ಸ್) ಹಿಂದಿಕ್ಕಿದರು. ಇನ್ನು ಕೇವಲ 68 ಇನ್ನಿಂಗ್ಸ್ಗಳಲ್ಲಿ 25 ಶತಕಗಳ ಗಡಿ ದಾಟಿದ್ದ ಆಸ್ಟ್ರೇಲಿಯಾದ ಡಾನ್ ಬ್ರಾಡ್ಮನ್ ಮೊದಲ ಸ್ಥಾನದಲ್ಲಿದ್ದಾರೆ.
ಬಾಲ್ ಟ್ಯಂಪರಿಂಗ್ ಕೇಸ್ನಿಂದ ನಿಷೇಧಕ್ಕೊಳಗಾಗಿ ಮತ್ತೆ ತಂಡಕ್ಕೆ ಮರಳಿರುವ ಸ್ಮಿತ್ ಅಮೋಘ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಪ್ರಿಯರ ಮನ ಗೆದ್ದಿದ್ದಾರೆ. ಆಂಗ್ಲರ ಮಾಜಿ ನಾಯಕ ಮೈಕಲ್ ವಾನ್ ಕೂಡ ಟ್ವೀಟ್ ಮೂಲಕ ಬೆಸ್ಟ್ ಟೆಸ್ಟ್ ಬ್ಯಾಟ್ಸ್ಮನ್ ಎಂದು ಹಾಡಿಹೊಗಳಿದ್ದಾರೆ. ನಿಷೇಧಕ್ಕೂ ಮುನ್ನ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನದಲ್ಲಿದ್ದ ಅವರು ನಾಲ್ಕನೇ ಸ್ಥಾನಕ್ಕೆ (857 ಅಂಕ) ಕುಸಿತ ಕಂಡಿದ್ದರೂ ಕೂಡ, ಇದೇ ಫಾರ್ಮ್ ಮುಂದುವರೆದರೆ ಮತ್ತೆ ನಂ.1 ಪಟ್ಟಕ್ಕೇರುವ ದಿನಗಳು ದೂರವಿಲ್ಲ. ಸದ್ಯ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ (922) ನಂಬರ್ ಒನ್ ಸ್ಥಾನದಲ್ಲಿದ್ದಾರೆ.
ಸದ್ಯ ಆ್ಯಶಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿಗೆ ಆಸ್ಟ್ರೇಲಿಯಾ 385 ರನ್ ಗುರಿ ನೀಡಿದ್ದು, ನಿನ್ನೆ 4ನೇ ದಿನದಂತ್ಯಕ್ಕೆ ಆಂಗ್ಲರು ವಿಕೆಟ್ ನಷ್ಟವಿಲ್ಲದೆ 13 ರನ್ ಗಳಿಸಿದ್ದಾರೆ.