ನವದೆಹಲಿ: ಭಾರತದ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಗರಿಷ್ಠ ವಿಕೆಟ್ ಪಡೆದಿರುವ ದಾಖಲೆ ಹೊಂದಿರುವ ಕನ್ನಡಿಗ ಅನಿಲ್ ಕುಂಬ್ಳೆಯನ್ನು ಬೌಲಿಂಗ್ ವಿಭಾಗದ ರಾಹುಲ್ ದ್ರಾವಿಡ್ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವ್ ವಾ ಬಣ್ಣಿಸಿದ್ದಾರೆ.
ಆಸ್ಟ್ರೇಲಿಯಾ ತಂಡವನ್ನು 57 ಪಂದ್ಯಗಲ್ಲಿ ಮುನ್ನಡೆಸಿ 72 ಗೆಲುವಿನ ಸರಾಸರಿ ಹೊಂದಿರುವ ಸ್ಟೀವ್ 41 ಪಂದ್ಯಗಳಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. 1997 ಆಸ್ಟ್ರೇಲಿಯಾ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದರಿಂದ ಹಿಡಿದು 2004ರವರೆಗೆ ತಂಡವನ್ನು ಮುನ್ನಡೆಸಿದ್ದರು. ಅವರ ನಾಯಕತ್ವದ ದಾಖಲೆಯೆಂದರೆ ಟೆಸ್ಟ್ ಕ್ರಿಕೆಟ್ನಲ್ಲಿ ಸತತ 16 ಪಂದ್ಯಗಳಲ್ಲಿ ಜಯ ಸಾಧಿಸಿದ್ದು. ಆದರೆ 2001ರಲ್ಲಿ ಸೌರವ್ ಗಂಗೂಲಿ ನೇತೃತ್ವದ ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್ನಲ್ಲಿ ಆಸೀಸ್ ನಡೆಸುತ್ತಿದ್ದ ದಂಡಯಾತ್ರೆಗೆ ಪೂರ್ಣ ವಿರಾಮ ಹಾಕಿತ್ತು.
ಕ್ರಿಕೆಟ್ ಆಟವನ್ನು ಆನಂದಿಸುತ್ತಾ ತಮ್ಮ ದೇಶದ ಪರವಾಗಿ ಪರ ಅವರಂತೆ( ಅನಿಲ್ ಕುಂಬ್ಳೆ) ಆಡಿದ ಮತ್ತೊಬ್ಬ ಆಟಗಾರನನ್ನು ನಾನು ನೋಡಿಲ್ಲ. ಇದು(ಕ್ರಿಕೆಟ್) ಎಲ್ಲವೂ ಆಗಿತ್ತು. ಅವರನ್ನು ಖಂಡಿತಾ ಒಬ್ಬ ಲೆಗ್ ಸ್ಪಿನ್ನರನಂತೆ ಎದುರಿಸದೆ, ಸ್ಲೋ ಇನ್-ಸ್ವಿಂಗ್ ಬೌಲರ್ನಂತೆ ಎಂದು ಆಡುತ್ತಿದ್ದೆವು ಎಂದಿದ್ದಾರೆ.
ಅವರು ಬೌಲಿಂಗ್ ವೇಗದಲ್ಲಿ ಅದ್ಭುತ ಬದಲಾವಣೆ ಹೊಂದಿದ್ದರು. ಕ್ರೀಸ್ಅನ್ನು ಬಳಸುವುದರಲ್ಲಿ ಮತ್ತು ಬೌಲಿಂಗ್ನಲ್ಲಿ ತೋರುತ್ತಿದ್ದ ವೇರಿಯೇಷನ್ಸ್ ಅತ್ಯುತ್ತಮವಾಗಿತ್ತು. ಅವರು ಕಠಿಣ ಪ್ರತಿಸ್ಪರ್ಧಿಯಾಗಿದ್ದರು. ಅವರು ನಮ್ಮ ವಿರುದ್ಧ ಕಳಪೆ ಬೌಲಿಂಗ್ ಮಾಡಿರುವುದು ನನಗೆ ನೆನೆಪಿಲ್ಲ. ಖಂಡಿತಾ ಅವರು ಬೌಲಿಂಗ್ ವಿಭಾಗದ ದ್ರಾವಿಡ್ನಂತಿದ್ದರು. ನಾಯಕನಿಗೆ ಕುಂಬ್ಳೆಯವರಿಗೆ ಹೇಗೆ, ಯಾವ ಸಮಯದಲ್ಲಿ ತಂಡಕ್ಕೆ ಏನು ಮಾಡಲಿದ್ದಾರೆ ಎಂಬುದು ತಿಳಿದಿತ್ತು ಎಂದು ವಾ ಹೇಳಿದ್ದಾರೆ.
ಅನಿಲ್ ಕುಂಬ್ಳೆ ಆಸ್ಟ್ರೆಲಿಯಾ ವಿರುದ್ಧ 1996ರಿಂದ 2008ರವರೆಗೆ 20 ಟೆಸ್ಟ್ ಪಂದ್ಯಗಳಲ್ಲಿ 111 ವಿಕೆಟ್ ಪಡೆದಿದ್ದಾರೆ. 2 ಬಾರಿ 10 ವಿಕೆಟ್ ಹಾಗೂ 10 ಬಾರಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಒಟ್ಟಾರೆ 132 ಟೆಸ್ಟ್ ಪಂದ್ಯಗಳನ್ನಾಡಿದ್ದು, 619 ವಿಕೆಟ್ ಪಡೆದಿದ್ದಾರೆ.