ಲಂಡನ್:ಆ್ಯಶಸ್ ಸರಣಿಯಎರಡನೇ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡಿದ್ದ ಆಸೀಸ್‌ನ ಸ್ಟಿವ್ ಸ್ಮಿತ್ ಚೇತರಿಕೆ ಕಾಣದ ಹಿನ್ನಲೆ ಮೂರನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ.
ಎರಡನೇ ಟೆಸ್ಟ್ನ ನಾಲ್ಕನೇ ದಿನ ಬ್ಯಾಟಿಂಗ್ ನಡೆಸುತ್ತಿದ್ದ ವೇಳೆ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಎಸೆದ ಬೌನ್ಸರ್ ಸ್ಮಿತ್ ಕುತ್ತಿಗೆಗೆ ಬಡಿದು ಗಂಭೀರ ಗಾಯಗೊಂಡಿದ್ದರು. ನಂತರ 9 ಓವರ್ಗಳ ಬಳಿಕ ಕ್ರೀಸ್ಗಾಗಮಿಸಿ ತಮ್ಮ ಇನ್ನಿಂಗ್ಸ್ ಮುಂದುವರಿಸಿ 92 ರನ್ಗಳಿಗೆ ಔಟಾಗಿದ್ದರು.
ಅಂದು ಅವರಿಗಾಗಿದ್ದ ಗಾಯ ಹೆಚ್ಚು ಗಂಭೀರ ಎನ್ನಿಸಿರಲಿಲ್ಲ. ಆದರೆ, 24 ಗಂಟೆಯ ನಂತರ ನೋವು ಹೆಚ್ಚಾದ ನಂತರ ಅವರು ಎರಡನೇ ದಿನ ಮೈದಾನಕ್ಕಿಳಿಯದೇ ಪಂದ್ಯದಿಂದಲೇ ಹೊರಗುಳಿದಿದ್ದರು. ಇವರ ಬದಲಿ ಆಟಗಾರನಾಗಿ ಮಾರ್ನಸ್ ಲ್ಯಾಬಸ್ಚಾಗ್ನೆ ಎರಡನೇ ಇನ್ನಿಂಗ್ಸ್ನಲ್ಲಿ ಕನ್ಕ್ಯುಷನ್ ಸಬ್ಟಿಟ್ಯೂಟ್ ಆಗಿ ತಂಡಕ್ಕೆ ಸೇರ್ಪಡೆಗೊಂಡಿದ್ದರು.
ಇದೀಗ ಗಾಯದಿಂದ ಇನ್ನೂ ಚೇತರಿಕೆ ಕಾಣದ ಸ್ಮಿತ್ ಮೂರನೇ ಟೆಸ್ಟ್ನಿಂದ ಹೊರಗುಳಿಯಬೇಕಾಗಿದೆ. ಈ ವಿಚಾರವನ್ನು ಆಸ್ಟ್ರೇಲಿಯಾದ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಖಚಿತಪಡಿಸಿದ್ದಾರೆ.
ಸ್ಟಿವ್ ಸ್ಮಿತ್ ಬ್ಯಾಟಿಂಗ್ ನಡೆಸಿರುವ ಮೂರು ಇನ್ನಿಂಗ್ಸ್ನಲ್ಲಿ 142,144 ಹಾಗೂ 92 ರನ್ಗಳಿಸಿದ್ದರು. ಇದೀಗ ಮೂರನೇ ಟೆಸ್ಟ್ನಿಂದ ಹೊರಬಿದ್ದಿರುವುದು ಆಸ್ಟ್ರೇಲಿಯಾಗೆ ಬಹುದೊಡ್ಡ ಹಿನ್ನಡೆಯಾಗಿದೆ.