ಮ್ಯಾಂಚೆಸ್ಟರ್:ಗಾಯಗೊಂಡು ಆ್ಯಶಸ್ ಸರಣಿಯ ಮೂರನೇ ಟೆಸ್ಟ್ನಿಂದ ಹೊರಗುಳಿದಿದ್ದ ಆಸೀಸ್ ದಾಂಡಿಗ ಸ್ಟೀವ್ ಸ್ಮಿತ್ ನಾಲ್ಕನೇ ಟೆಸ್ಟ್ನಲ್ಲಿ ಅಕ್ಷರಶಃ ಅಬ್ಬರಿಸಿದ್ದಾರೆ. ಸ್ಮಿತ್ ಆರ್ಭಟಕ್ಕೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಸಹ ಪಕ್ಕಕ್ಕೆ ತಳ್ಳಲ್ಪಟ್ಟಿದ್ದಾರೆ.
ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫೋರ್ಡ್ನಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ನ ಎರಡನೇ ದಿನದಾಟದಲ್ಲಿ ಸ್ಟೀವ್ ಸ್ಮಿತ್ ದ್ವಿಶತಕ ಸಿಡಿಸಿ ಮಿಂಚಿದ್ದಾರೆ.
319 ಎಸೆತಗಳನ್ನೆದುರಿಸಿದ ಅವರು 24 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 211 ರನ್ ಗಳಿಸಿ ಪರಾಕ್ರಮ ಮೆರೆದರು. ಈ ಮೂಲಕ ಕಡಿಮೆ ಇನ್ನಿಂಗ್ಸ್ನಲ್ಲಿ 26 ಟೆಸ್ಟ್ ಶತಕದ ಲಿಸ್ಟ್ನಲ್ಲಿ ಸ್ಮಿತ್, ಸಚಿನ್ ತೆಂಡುಲ್ಕರ್ ಹಿಂದಿಕ್ಕಿದ್ದಾರೆ.
ಈಗಾಗಲೇ ಟೆಸ್ಟ್ ಶ್ರೇಯಾಂಕದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿರುವ ಸ್ಮಿತ್ ಸದ್ಯ ವೇಗದ 26 ಟೆಸ್ಟ್ ಶತಕಗಳ ಲೆಕ್ಕಾಚಾರದಲ್ಲಿ ಸಚಿನ್ರನ್ನು ಮೀರಿಸಿ ಮುನ್ನಡೆದಿದ್ದಾರೆ. ಸ್ಮಿತ್ ರನ್ದಾಹಕ್ಕೆ ಇನ್ನೆಷ್ಟು ದಾಖಲೆಗಳು ಪತನವಾಗಲಿದೆ ಎನ್ನುವುದು ಕುತೂಹಲ!
ಇನ್ನಿಂಗ್ಸ್ ಲೆಕ್ಕಾಚಾರದಲ್ಲಿ ವೇಗವಾಗಿ ದಾಖಲಾದ 26 ಟೆಸ್ಟ್ ಶತಕ:
- ಡಾನ್ ಬ್ರಾಡ್ಮನ್- 69 ಇನ್ನಿಂಗ್ಸ್
- ಸ್ಟೀವ್ ಸ್ಮಿತ್ - 121 ಇನ್ನಿಂಗ್ಸ್
- ಸಚಿನ್ ತೆಂಡೂಲ್ಕರ್ - 136 ಇನ್ನಿಂಗ್ಸ್
- ಸುನಿಲ್ ಗವಾಸ್ಕರ್ - 144 ಇನ್ನಿಂಗ್ಸ್
- ಮ್ಯಾಥ್ಯೂ ಹೇಡನ್ - 145 ಇನ್ನಿಂಗ್ಸ್