ದುಬೈ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್ಗಳ ಸೋಲನುಭವಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ಗೆ ಮತ್ತೊಂದು ಆಘಾತ ಎದುರಾಗಿದ್ದು, ಡೆತ್ ಓವರ್ ಸ್ಪೆಷಲಿಸ್ಟ್ ಎಂದೇ ಖ್ಯಾತರಾಗಿರುವ ಡ್ವೇನ್ ಬ್ರಾವೋ ಮುಂದಿನ ಕೆಲವು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಈ ವಿಚಾರವನ್ನು ಕೋಚ್ ಸ್ಟೆಫನ್ ಫ್ಲಮಿಂಗ್ ಖಚಿತಪಡಿಸಿದ್ದಾರೆ.
ಶನಿವಾರ ನಡೆದ ಪಂದ್ಯದಲ್ಲಿ ಬ್ರಾವೋ ತೊಡೆ ಸಂಧು ನೋವಿಗೆ ಒಳಗಾಗಿದ್ದರು. ಹಾಗಾಗಿ ನಿರ್ಣಾಯಕ 20 ನೇ ಓವರ್ ಎಸೆಯಲು ಉತ್ತಮ ಬೌಲರ್ ಇಲ್ಲದ ಕಾರಣ ಜಡೇಜಾ ಅವರಿಗೆ ಬೌಲಿಂಗ್ ನೀಡಲಾಗಿತ್ತು, ಆ ಓವರ್ನಲ್ಲಿ ಡೆಲ್ಲಿ ಗೆಲುವಿಗೆ 17 ರನ್‌ಗಳ ಅಗತ್ಯವಿತ್ತು. ಆದರೆ ಅಕ್ಸರ್ ಪಟೇಲ್ 3 ಸಿಕ್ಸರ್ ಸಿಡಿಸಿ ಡೆಲ್ಲಿಗೆ ರೋಚಕ ಜಯ ತಂದುಕೊಟ್ಟರು.
ಈ ಕುರಿತು ಮಾತನಾಡಿರುವ ಫ್ಲಮಿಂಗ್, " ಬ್ರಾವೋ ಬಲ ತೊಡೆಯ ಸಂಧು ನೋವಿನಿಂದ ಬಳಲುತ್ತಿದ್ದರು. ಗಾಯದ ಸಮಸ್ಯೆ ಗಂಭೀರವಾದ ಕಾರಣಕ್ಕೆ ಅವರನ್ನು ಪಂದ್ಯದಲ್ಲಿ ಮುಂದುವರಿಯಲು ಬಿಡಲಿಲ್ಲ. ಫೈನಲ್ ಓವರ್ ಬೌಲಿಂಗ್ ಮಾಡಲು ಸಾಧ್ಯವಾಗದೇ ಇರುವುದಕ್ಕೆ ಬ್ರಾವೋ ಬಹಳ ಬೇಸರದಲ್ಲಿದ್ದಾರೆ. ಡೆತ್ ಓವರ್‌ಗಳಲ್ಲಿ ಅವರು ತಂಡದ ಪ್ರಮುಖ ಅಸ್ತ್ರವಾಗಿದ್ದರು. ದುರದೃಷ್ಟ ವಶಾತ್ ಅವರಿಂದ ನಿನ್ನೆಯ ಪಂದ್ಯದಲ್ಲಿ ಜವಾಬ್ದಾರಿ ನಿಭಾಯಿಸಲು ಸಾಧ್ಯವಾಗಲಿಲ್ಲ," ಎಂದು ಫ್ಲೆಮಿಂಗ್ ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಮಾತು ಮುಂದುವರಿಸಿ " ಅವರ ಗಾಯದ ಸಮಸ್ಯೆಯನ್ನು ಮುಂದಿನ ದಿನಗಳಲ್ಲಿ ಪರಿಶೀಲಿಸಲಾಗುವುದು. ಸದ್ಯಕ್ಕೆ ಅವರಿಗೆ ಒಂದರೆಡು ವಾರಗಳ ವಿಶ್ರಾಂತಿ ಅಗತ್ಯವಿದೆ "ಎಂದು ಫ್ಲೆಮಿಂಗ್ ಹೇಳಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಚೆನ್ನೈ ಸೂಪರ್ಕಿಂಗ್ಸ್ 180 ರನ್‌ಗಳ ಗುರಿ ನೀಡಿತ್ತು. ಇದನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಶಿಖರ್ ಧವನ್ ದಾಖಲಿಸಿದ ಅಜೇಯ ಶತಕದ ಬಲದಿಂದ 19.5 ಓವರ್‌ಗಳಲ್ಲಿ ಗುರಿ ಮುಟ್ಟಿ ಸ್ಮರಣೀಯ ಗೆಲುವು ದಾಖಲಿಸಿ ಅಗ್ರಸ್ಥಾನಕ್ಕೇರಿತು.