ಕೊಲಂಬೊ:2011ರ ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಫಿಕ್ಸಿಂಗ್ ನಡೆದಿದೆ ಎಂಬ ಆರೋಪವನ್ನು ಸೂಕ್ಷ್ಮವಾಗಿ ಪರಿಗಣಿಸಿರುವ ಶ್ರೀಲಂಕಾ ಸರ್ಕಾರ ಮಂಗಳವಾರ ಕ್ರಿಮಿನಲ್ ತನಿಖೆ ನಡೆಸಲು ಆದೇಶಿಸಿದೆ.
ಕಳೆದ ವಾರವಷ್ಟೇ 2011ರಲ್ಲಿ ಶ್ರೀಲಂಕಾದ ಕ್ರೀಡಾ ಸಚಿವರಾಗಿದ್ದ ಮಹಿಂದಾನಂದ ಅಲುತ್ ಗಮಗೆ, 2011ರ ವಿಶ್ವಕಪ್ ಫೈನಲ್ ಫಿಕ್ಸಿಂಗ್ಗೆ ಒಳಗಾಗಿತ್ತು. ಶ್ರೀಲಂಕಾ ತಂಡ ವಿಶ್ವಕಪ್ ಅನ್ನು ಭಾರತಕ್ಕೆ ಮಾರಾಟ ಮಾಡಿತ್ತು ಎಂದು ಆರೋಪಿಸಿ ದೊಡ್ಡ ವಿವಾದ ಸೃಷ್ಟಿಸಿದ್ದರು. ಅವರಷ್ಠೇ ಅಲ್ಲದೆ 1996ರ ವಿಶ್ವಕಪ್ ವಿಜೇತ ತಂಡದ ನಾಯಕ ಅರ್ಜುನ್ ರಣತುಂಗಾ ಕೂಡ ವಿಶ್ವಕಪ್ ಫೈನಲ್ ಪಂದ್ಯದ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದರು.
ಆದರೆ, ಈ ವಿವಾದವನ್ನು ಅಲ್ಲೆಗಳೆದಿದ್ದ ಅಂದಿ ಲಂಕಾ ತಂಡದ ನಾಯಕ ಕುಮಾರ್ ಸಂಗಾಕ್ಕರ ಹಾಗೂ ಹಿರಿಯ ಬ್ಯಾಟ್ಸ್ಮನ್ ಮಹೇಲಾ ಜಯವರ್ದನೆ ಈ ಆರೋಪಕ್ಕೆ ಸಾಕ್ಷ್ಯಗಳಿದ್ದರೆ ಐಸಿಸಿ ಭ್ರಷ್ಟಾಚಾರ ಸಮಿತಿಗೆ ನೀಡಿ ಎಂದು ಸವಾಲ್ ಎಸೆದಿದ್ದರು.
ಇದೀಗ ಆ ಆರೋಪಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ಘಟಕಾದಿಂದ ಕ್ರಿಮಿನಲ್ ವಿಚಾರಣೆ ಆರಂಭಿಸಲಾಗಿದೆ ಎಂದು ಕ್ರೀಡಾ ಸಚಿವಾಲಯದ ಕಾರ್ಯದರ್ಶಿ ಕೆಡಿಎಸ್ ರುವಾನಚಂದ್ರ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇನ್ನು 2011ರಲ್ಲಿ ಶ್ರೀಲಂಕಾ ಆಯ್ಕೆ ಸಮಿತಿ ಮುಖ್ಯಸ್ಥ ಹಾಗೂ ಮಾಜಿ ನಾಯಕ ಅರವಿಂದ ಡಿ ಸಿಲ್ವಾ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.