ಕೊಲಂಬೋ: ಶ್ರೀಲಂಕಾ ತಂಡದ ಆರಂಭಿಕ ಬ್ಯಾಟ್ಸ್ಮನ್ ಉಪುಲ್ ತರಂಗ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮಂಗಳವಾರ ನಿವೃತ್ತಿ ಘೋಷಿಸಿದ್ದಾರೆ.
2005ರಲ್ಲಿ ಭಾರತ ವಿರುದ್ಧದ ಟೆಸ್ಟ್ ಪಂದ್ಯ ಆಡುವ ಮೂಲಕ ತರಂಗ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 36 ವರ್ಷದ ಆಟಗಾರ ಮಾರ್ಚ್ 26, 2019ರಂದು ಕೇಪ್ಟೌನ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದರು.
ತರಂಗ 14 ವರ್ಷಗಳ ಕಾಲ ಶ್ರೀಲಂಕಾ ತಂಡವನ್ನು ಪ್ರತಿನಿಧಿಸಿದ್ದು, 31 ಟೆಸ್ಟ್ , 235 ಏಕದಿನ ಪಂದ್ಯ ಮತ್ತು 26 ಟಿ-20 ಪಂದ್ಯಗಳನ್ನಾಡಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ 33.74 ಸರಾಸರಿಯಲ್ಲಿ 15 ಶತಕಗಳ ಸಹಿತ 6,951 ಸಿಡಿಸಿದ್ದಾರೆ. 31 ಟೆಸ್ಟ್ ಪಂದ್ಯಗಳಲ್ಲಿ 1,754 ಮತ್ತು 21 ಟಿ-20 ಪಂದ್ಯಗಳಲ್ಲಿ 407 ರನ್ಗಳಿಸಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿರುವ ಸಂಗತಿಯನ್ನು ತರಂಗ ಟ್ವಿಟರ್ ಮೂಲಕ ಖಾತರಿ ಪಡಿಸಿದ್ದಾರೆ. "ನನ್ನ ಪ್ರೀತಿಯ ಗೆಳೆಯರೇ, ಎಲ್ಲಾ ಒಳ್ಳೆಯ ಸಂಗತಿಗಳಿಗೂ ಕೊನೆ ಎಂಬುದಿದೆ. 15 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ತೆರೆ ಎಳೆಯಲು ಇದು ಉತ್ತಮ ಸಮಯವಾಗಿದೆ ಎಂದು ನಾನು ನಂಬುತ್ತೇನೆ. ನನ್ನ ಮೇಲೆ ನಂಬಿಕೆಯಿಟ್ಟು ಅವಕಾಶ ನೀಡಿದ್ದ ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ನನ್ನ ಧನ್ಯವಾದಗಳು" ಎಂದು ತರಂಗ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನು ಓದಿ:ಮೊಟೆರಾದಲ್ಲಿ ಸ್ಪಿನ್ನರ್ಗಳು ಮೇಲುಗೈ ಸಾಧಿಸಲಿದ್ದಾರೆ ಎಂಬ ವಾದಕ್ಕೆ ಕೊಹ್ಲಿ ಕೊಟ್ಟ ಪ್ರತ್ಯುತ್ತರ ಇಷ್ಟೇ..