ಕೊಲೊಂಬೊ: ಬಾಂಗ್ಲಾದೇಶದ ವಿರುದ್ಧದ ಕೊನೆಯ ಏಕದಿನ ಪಂದ್ಯವನ್ನು ಗೆದ್ದು, ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿರುವ ನುವಾನ್ ಕುಲಶೇಖರಗೆ ಅರ್ಪಿಸುವ ಅಭಿಲಾಷೆಯನ್ನು ಲಂಕಾ ತಂಡ ವ್ಯಕ್ತಪಡಿಸಿದೆ.
44 ತಿಂಗಳ ನಂತರ ತವರಿನಲ್ಲಿ ಏಕದಿನ ಸರಣಿ ಗೆದ್ದಿರುವ ಶ್ರೀಲಂಕಾ ತಂಡ ತನ್ನ ಮೊದಲ ಪಂದ್ಯವನ್ನು 91 ರನ್ಗಳಿಂದ ಗೆದ್ದು ವೇಗಿ ಲಸಿತ್ ಮಲಿಂಗಾಗೆ ವಿದಾಯದ ಉಡುಗೊರೆಯಾಗಿ ನೀಡಿತ್ತು. ನಂತರ ಎರಡನೇ ಪಂದ್ಯವನ್ನು 7 ವಿಕೆಟ್ಗಳಿಂದ ಗೆಲ್ಲುವ ಮೂಲಕ 44 ತಿಂಗಳ ಸರಣಿ ಜಯದ ಬರವನ್ನು ನೀಗಿಸಿಕೊಂಡಿತ್ತು.
ಇದೀಗ ಬುಧವಾರ ನಡೆಯಲಿರುವ ಅಂತಿಮ ಪಂದ್ಯವನ್ನು ಗೆದ್ದು ಅದನ್ನು 2011 ವಿಶ್ವಕಪ್ನಲ್ಲಿ ತಂಡ ಫೈನಲ್ಗೇರಲು ನೆರವಾಗಿದ್ದ ನುವಾನ್ ಕುಲಶೇಖರ್ ಅವರಿಗೆ ಅರ್ಪಿಸಲು ಲಂಕಾ ತಂಡದ ಆಟಗಾರರು ಉತ್ಸುಕರಾಗಿದ್ದಾರೆ. ಇದರ ಜೊತೆಗೆ ತವರಿನ ಲಾಭ ಪಡೆದು ಕ್ಲೀನ್ಸ್ವೀಪ್ ಸಾಧಿಸುವ ಉದ್ದೇಶ ಹೊಂದಿದೆ.
37 ವರ್ಷದ ನುವಾನ್ ಕುಲಶೇಖರ್ ಶ್ರೀಲಂಕಾ ತಂಡದ ಪರ 21 ಟೆಸ್ಟ್, 184 ಏಕದಿನ ಹಾಗೂ 58 ಟಿ-20 ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್ನಲ್ಲಿ 48 ವಿಕೆಟ್ ಹಾಗೂ 391 ರನ್, ಏಕದಿನ ಕ್ರಿಕೆಟ್ನಲ್ಲಿ 199 ವಿಕೆಟ್ ಹಾಗೂ 4 ಅರ್ಧಶತಕದ ಜೊತೆಗೆ 1325 ರನ್ ಹಾಗೂ ಟಿ-20 ಯಲ್ಲಿ 66 ವಿಕೆಟ್ ಪಡೆದಿದ್ದಾರೆ.