ಕೊಲಂಬೊ: ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಏಷ್ಯಾಕಪ್ ಟೂರ್ನಿಯನ್ನು ತಮ್ಮ ದೇಶದಲ್ಲಿ ನಡೆಸಲು ಶ್ರೀಲಂಕಾ ಕ್ರಿಕೆಟ್ ಮಂಡಳಿ ಸಿದ್ಧವಿದೆ ಎಂದು ಎಸ್ಎಲ್ಸಿ ಅಧ್ಯಕ್ಷ ಶಮ್ಮಿ ಸಿಲ್ವಾ ಹೇಳಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಶ್ರೀಲಂಕಾದಲ್ಲಿ ಏಷ್ಯಾಕಪ್ ನಡೆಸಲು ಒಪ್ಪಿಕೊಂಡಿವೆ ಎಂದು ಸಿಲ್ವಾ ತಿಳಿಸಿದ್ದಾರೆ.
ಈ ಬಾರಿಯ ಏಷ್ಯಾಕಪ್ ಪಾಕಿಸ್ತಾನದಲ್ಲಿ ನಿಯೋಜನೆಗೊಂಡಿತ್ತು. ಭಾರತ ತಂಡ ಪಾಕಿಸ್ತಾನಕ್ಕೆ ತೆರಳಲು ರಾಜಕೀಯ ಭಿನ್ನಾಭಿಪ್ರಾಯ ಅಡ್ಡಿಯಾಗಿರುವುದರಿಂದ ಪಿಸಿಬಿ ಅನಿವಾರ್ಯವಾಗಿ ಈ ತನ್ನ ಆತಿಥ್ಯವನ್ನು ಬೇರೆ ದೇಶಕ್ಕೆ ಬಿಟ್ಟಿಕೊಡಬೇಕಿತ್ತು. ಅಲ್ಲದೆ ಪಾಕಿಸ್ತಾನದಲ್ಲಿ ಕೋವಿಡ್-19 ಸಮಸ್ಯೆ ಹಾಗೂ ಭದ್ರತಾ ಸಮಸ್ಯೆ ಇರುವುದರಿಂದ ಯುಎಇನಲ್ಲಿ ನಡೆಸಬಹುದು ಎನ್ನಲಾಗಿತ್ತು. ಇದೀಗ ಶ್ರೀಲಂಕಾದಲ್ಲಿ ನಡೆಸಲು ಕೂಡ ಪಿಸಿಬಿ ಸಮ್ಮತಿಸಿದೆ.
ನಾವು ಪಿಸಿಬಿ ಜೊತೆ ಏಷ್ಯಾಕಪ್ ಕುರಿತು ಚರ್ಚಿಸಿದ್ದೇವೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಏಷ್ಯಾಕಪ್ ಟೂರ್ನಿಯನ್ನು ಶ್ರೀಲಂಕಾದಲ್ಲಿ ನಡೆಸಲು ಅವರು ಈಗಾಗಲೆ ಒಪ್ಪಿದ್ದಾರೆ ಎಂದು ಶಮ್ಮಿ ಸಿಲ್ವಾ ತಿಳಿಸಿದ್ದಾರೆ.
ಕಳೆದ 2018ರ ಟೂರ್ನಿಯಲ್ಲಿ ಭಾರತವು ಕೊನೆಯ ಎಸೆತದಲ್ಲಿ ಸಿಂಗಲ್ ತೆಗೆಯುವ ಮೂಲಕ 3 ವಿಕೆಟ್ಗಳ ರೋಚಕ ಜಯ ಸಾಧಿಸಿತ್ತು. ಇಲ್ಲಿಯವರೆಗೆ 14 ಏಷ್ಯಾಕಪ್ ಟೂರ್ನಿ ನಡೆದಿದ್ದು, ಭಾರತ 7 ಬಾರಿ, ಶ್ರೀಲಂಕಾ 5 ಬಾರಿ ಹಾಗೂ ಪಾಕಿಸ್ತಾನ 2 ಬಾರಿ ಚಾಂಪಿಯನ್ ಪಟ್ಟ ಗಳಿಸಿವೆ.