ಪಲ್ಲೆಕೆಲೆ(ಶ್ರೀಲಂಕಾ): ಏಂಜೆಲೋ ಮ್ಯಾಥ್ಯೂಸ್ ಅದ್ಭುತ ಬೌಲಿಂಗ್ ಪ್ರದರ್ಶನದ ನೆರವಿನಿಂದ ಶ್ರೀಲಂಕಾ ತಂಡ 6 ರನ್ಗಳ ರೋಚಕ ಗೆಲುವು ಸಾಧಿಸುವ ಮೂಲಕ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿಯನ್ನು 3-0ಯಲ್ಲಿ ಕ್ಲೀನ್ಸ್ವೀಪ್ ಸಾಧಿಸಿದೆ.
ಕೊನೆಯ ಓವರ್ನಲ್ಲಿ ವಿಂಡೀಸ್ ಗೆಲುವಿಗೆ 14 ರನ್ಗಳ ಅಗತ್ಯವಿತ್ತು. 8 ವಿಕೆಟ್ ಕಳೆದುಕೊಂಡಿದ್ದ ವಿಂಡೀಸ್ಗೆ 13 ಎಸೆತಗಳಲ್ಲಿ 33 ರನ್ ಗಳಿಸಿದ್ದ ಫ್ಯಾಬಿಯನ್ ಅಲೆನ್ಏಕೈಕ ಭರವಸೆಯಾಗಿದ್ದರು. ಲಂಕಾದ ಅನುಭವಿ ಏಂಜೆಲೋ ಮ್ಯಾಥ್ಯೂಸ್ ಕೊನೆಯ ಓವರ್ ಎಸೆಯಲು ಸಿದ್ಧರಾಗಿದ್ದರು. ಮೊದಲ ಎಸೆತವನ್ನು ಫೋರ್ಗಟ್ಟಿದ ಅಲೆನ್ ನಂತರದ ಎಸೆತದಲ್ಲಿ ಔಟ್ ಆದರು. ಕೊನೆಯ 4 ಎಸೆತಗಳಲ್ಲಿ ಕೇವಲ 2 ರನ್ ಬಿಟ್ಟುಕೊಟ್ಟ ಮ್ಯಥ್ಯೂಸ್ ಲಂಕಾ ಪಾಲಿಗೆ ಹೀರೋ ಆದರು. ಶ್ರೀಲಂಕಾ ತಂಡ ಕೊನೆಯ ಏಕದಿನ ಪಂದ್ಯವನ್ನು 6 ರನ್ಗಳಿಂದ ಗೆಲ್ಲುವ ಮೂಲಕ 3-0ಯಲ್ಲಿ ಸರಣಿ ಕ್ಲೀನ್ಸ್ವೀಪ್ ಸಾಧನೆ ಮಾಡಿತು.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ್ದ ಶ್ರೀಲಂಕಾ ತಂಡ ಕುಶಾಲ್ ಮೆಂಡಿಸ್ (55), ಕರುಣರತ್ನೆ(44), ಕುಸಾಲ್ ಪೆರೆರಾ(44), ಧನಂಜಯ ಡಿ ಸಿಲ್ವಾ(51), ತಿಸರಾ ಪೆರೆರಾ(38) ಅವರ ಅಮೋಘ ಪ್ರದರ್ಶನದ ನೆರವಿನಿಂದ 301 ರನ್ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತ್ತು.