ಅಹ್ಮದಾಬಾದ್: ಸ್ಪಿನ್ ಬೌಲಿಂಗ್ ದಾಳಿ ಎದುರಿಸಲಾಗದೆ ಪ್ರವಾಸಿ ಇಂಗ್ಲೆಂಡ್ ತಂಡ ಮೂರನೇ ಟೆಸ್ಟ್ನಲ್ಲಿ ಕೇವಲ 2 ದಿನದಲ್ಲೇ ಭಾರತಕ್ಕೆ ಶರಣಾಗಿತ್ತು. ಈ ಪಂದ್ಯದ ನಂತರ ಕೆಲವು ಮಾಜಿ ಕ್ರಿಕೆಟಿಗರು ಪಿಚ್ ಬಗ್ಗೆ ತೀವ್ರ ಟೀಕಾಪ್ರಹಾರ ನಡೆಸಿದ್ದರು. ಈ ಕುರಿತು ಕೊನೆಗೂ ಮೌನ ಮುರಿದಿರುವ ಟೀಮ್ ಇಂಡಿಯಾ ನಾಯಕ ಕೊಹ್ಲಿ, ಸ್ಪಿನ್ನಿಂಗ್ ಟ್ರ್ಯಾಕ್ ಎಂದು ಟೀಕಿಸುವುದನ್ನು ನಿಲ್ಲಿಸಿ, ತಮ್ಮ ಆಟವನ್ನು ಉತ್ತಮಗೊಳಿಸುವತ್ತ ಗಮನ ನೀಡಬೇಕೆಂದು ಸಲಹೆ ನೀಡಿದ್ದಾರೆ.
ಮೊಟೆರಾದಲ್ಲಿ ನಡೆದ ಪಿಂಕ್ಬಾಲ್ ಟೆಸ್ಟ್ನಲ್ಲಿ ಇಂಗ್ಲೆಂಡ್ ತಂಡ ಭಾರತೀಯ ಸ್ಪಿನ್ ದಾಳಿಗೆ ನಲುಗಿ 112 ಮತ್ತು 81 ರನ್ಗಳಿಗೆ ಆಲೌಟ್ ಆಗಿತ್ತು. ಇದಕ್ಕೂ ಮುನ್ನ ಚೆನ್ನೈನ 2ನೇ ಟೆಸ್ಟ್ನಲ್ಲಿ 134 ಮತ್ತು 164 ರನ್ಗಳಿಗೆ ಆಲೌಟ್ ಆಗಿತ್ತು. ಇವೆರಡು ಪಂದ್ಯಗಳ ನಂತರ ಭಾರತೀಯ ಪಿಚ್ಗಳ ಬಗ್ಗೆ ಕೆಲವು ಟೀಕೆಗಳು ಕೇಳಿಬಂದಿದ್ದವು. ಆದರೆ ಈ ಕುರಿತು ಪಂದ್ಯಕ್ಕೂ ಮುನ್ನ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿರುವ ಕೊಹ್ಲಿ, "ಸ್ಪಿನ್ ಟ್ಟ್ಯಾಕ್ ಬಗ್ಗೆ ಯಾವಾಗಲೂ ಹೆಚ್ಚಿನ ಮಾತುಗಳು ಮತ್ತು ಹೆಚ್ಚಿನ ಸಂಭಾಷಣೆ ಇದ್ದೇ ಇರುತ್ತದೆ" ಎಂದಿದ್ದಾರೆ.
"ನಮ್ಮ ಮಾಧ್ಯಮಗಳು ಕೇವಲ ಸ್ಪಿನ್ ಟ್ರ್ಯಾಕ್‌ಗಳನ್ನು ಮಾತ್ರ ಟೀಕಿಸುವುದು ಅನ್ಯಾಯವೆಂದು ನನಗನ್ನಿಸುತ್ತಿದೆ. ನನ್ನ ಪ್ರಕಾರ ಯಾವುದೇ ಪಿಚ್ಗಳ ಬಗ್ಗೆಯಾದರೂ ಸಮತೋಲಿತ ಸಂಭಾಷಣೆ ನಡೆಯಬೇಕು" ಎಂದು ಮೂರನೆಯ ಟೆಸ್ಟ್‌ನ ಕೊನೆಯಲ್ಲಿ ಕೊಹ್ಲಿ, ಮೊಟೆರಾ ಪಿಚ್ ಬಗ್ಗೆ ದೂಷಿಸದೆ, ಬ್ಯಾಟ್ಸ್‌ಮನ್‌ಗಳ ತಂತ್ರವನ್ನು ದೂಷಿಸಿದ್ದರು.
ಇದನ್ನೂ ಓದಿ:ಸರಣಿ ಡ್ರಾ ಮಾಡಿಕೊಂಡರೆ ಅದು ನನ್ನ ಕ್ರಿಕೆಟ್ ಜೀವನದ ಅತ್ಯುತ್ತಮ ಸಾಧನೆ: ರೂಟ್