ದುಬೈ: ಟೂರ್ನಿಯಲ್ಲಿ ಕಳಪೆ ಪ್ರದರ್ಶನದ ಮೂಲಕ ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ಲೇ ಆಫ್‌ನಿಂದ ಹೊರಬಿದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ಬಲಿಷ್ಠ ಆರ್ಸಿಬಿ ತಂಡದ ವಿರುದ್ಧ ಗೆದ್ದು ಕೊನೆಯ ಸ್ಥಾನದಿಂದ 7ನೇ ಸ್ಥಾನಕ್ಕೆ ಬಡ್ತಿಪಡೆದಿದೆ.
ಆರಂಭಿಕನಾಗಿ ಕಣಕ್ಕಿಳಿದಿದ್ದ ರುತುರಾಜ್ ಗಾಯಕ್ವಾಡ್ ಅರ್ಧಶತಕ ಬಾರಿಸಿ ಸಿಎಸ್ಕೆ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರು 51 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಔಟಾಗದೆ 65 ರನ್ಗಳಿಸಿದರು.
ರುತುರಾಜ್ ಗಾಯಕ್ವಾಡ್ ಅರ್ಧಶತಕ ಸಿಡಿಸುತ್ತಿದ್ದಂತೆ ಸಾಮಾಜಿಕ ಜಾಲಾತಾಣದಲ್ಲಿ ಸ್ಪಾರ್ಕ್ ಎಂಬ ಪದ ಟ್ರೆಂಡ್ ಆಗಿದೆ.
ಏಕೆಂದರೆ 2 ಪಂದ್ಯಗಳ ಹಿಂದೆ ಧೋನಿ, "ತಂಡದಲ್ಲಿರುವ ಯುವ ಆಟಗಾರರಲ್ಲಿ ಪಂದ್ಯವನ್ನು ಗೆದ್ದು ಕೊಡುವ ಸ್ಪಾರ್ಕ್ ಕಾಣುತ್ತಿಲ್ಲ" ಎಂದು ಹೇಳಿಕೆ ನೀಡಿದ್ದರು. ಆ ಹೇಳಿಕೆಗೆ ಅಭಿಮಾನಿಗಳ ಜೊತೆಗೆ ಕೆಲವು ಕ್ರಿಕೆಟ್ ದಿಗ್ಗಜರು ಕೂಡ ಕಿಡಿಕಾರಿದ್ದರು. ಅಲ್ಲದೆ ಕೇದರ್ ಜಾಧವ್ ಅಥವಾ ಪಿಯೂಷ್ ಚಾವ್ಲಾ ಅವರಲ್ಲಿ ಧೋನಿಗೆ ಸ್ಪಾರ್ಕ್ ಕಾಣುತ್ತಿದೆಯಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಆದರೆ ಇಂದು ಫೀಲ್ಡಿಂಗ್ನಲ್ಲೂ 2 ಕ್ಯಾಚ್ ಪಡೆಯುವ ಮೂಲಕ ಉತ್ತಮ ಪ್ರದರ್ಶನ ತೋರಿದ್ದ ಗಾಯಕ್ವಾಡ್ ಬ್ಯಾಟಿಂಗ್ನಲ್ಲೂ ಮಿಂಚಿದ್ದರಲ್ಲದೇ ಕೊನೆಯವರೆಗೂ ಕ್ರೀಸ್ನಲ್ಲಿ ನಿಂತು ತಂಡವನ್ನು ಗೆಲುವಿನ ಗಡಿದಾಟಿಸಿದರು.
ಅಭಿಮಾನಿಗಳು ಗಾಯಕ್ವಾಡ್ ಅವರ ಬ್ಯಾಟಿಂಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವಕಾಶ ಕೊಟ್ಟರೆ ಯುವ ಆಟಗಾರರಿಂದ ಇಂತಹ ಸ್ಪಾರ್ಕ್ ಹೊರಬರುತ್ತದೆ ಎಂದು ಧೋನಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.