ಸೆಂಚುರಿಯನ್: ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ದಕ್ಷಿಣ ಆಫ್ರಿಕಾದ ವಿರುದ್ಧ ಸರಣಿಯಲ್ಲಿ ತಮ್ಮ150ನೇ ಪಂದ್ಯವಾಡುವ ಮೂಲಕ ಅತಿ ಹೆಚ್ಚು ಟೆಸ್ಟ್ ಆಡಿರುವ ಸಚಿನ್, ಪಾಂಟಿಂಗ್ ಸ್ಟಿವ್ ವಾ ಸಾಲಿಗೆ ಸೇರ್ಪಡೆಗೊಳ್ಳಲಿದ್ದಾರೆ.
ಈಗಾಗಲೇ ಇಂಗ್ಲೆಂಡ್ ಪರ 149 ಟೆಸ್ಟ್ ಪಂದ್ಯಗಳನ್ನಾಡುವ ಮೂಲಕ ಹೆಚ್ಚು ಪಂದ್ಯವಾಡಿರುವ ಇಂಗ್ಲೆಂಡ್ ಆಟಗಾರ ಎನಿಸಿಕೊಂಡಿರುವ ಜೇಮ್ಸ್ ಆ್ಯಂಡರ್ಸನ್ 575 ವಿಕೆಟ್ ಪಡೆದು ಹೆಚ್ಚು ವಿಕೆಟ್ ಪಡೆದ ವಿಶ್ವದ ವೇಗದ ಬೌಲರ್ ಎಂಬ ದಾಖಲೆಯನ್ನು ಹೊಂದಿದ್ದಾರೆ.
ಇದೀಗ ಗುರುವಾರದಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ 150 ಪಂದ್ಯವಾಡಲಿದ್ದು, ಅತಿಹೆಚ್ಚು ಟೆಸ್ಟ್ ಪಂದ್ಯಗಳನ್ನಾಡಿದ ವಿಶ್ವದ 9ನೇ ಆಟಗಾರ, ಹೆಚ್ಚು ಪಂದ್ಯಗಳನ್ನಾಡಿದ ಬೌಲರ್ ಹಾಗೂ ಇಂಗ್ಲೆಂಡ್ ಪರ ಹೆಚ್ಚು ಪಂದ್ಯಗಳನ್ನಾಡಿದ ಎರಡನೇ ಆಟಗಾರ ಎಂಬ ಶ್ರೇಯಕ್ಕೆ ಪಾತ್ರರಾಗಲಿದ್ದಾರೆ.