ಕರಾಚಿ:ಸೌರವ್ ಗಂಗೂಲಿ ಅವರ 4 ರಾಷ್ಟ್ರಗಳ ಸೂಪರ್ ಸಿರೀಸ್ ಫ್ಲಾಫ್ ಐಡಿಯಾ ಎಂದು ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್ ರಶೀದ್ ಲತೀಫ್ ಟೀಕಿಸಿದ್ದಾರೆ.
ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ ಹಾಗೂ ಮತ್ತೊಂದು ಟಾಪ್ ತಂಡ ಒಳಗೊಂಡಂತೆ ಸೂಪರ್ ಸಿರೀಸ್ಅನ್ನು 2021ಕ್ಕೆ ಭಾರತದಲ್ಲಿ ಆಯೋಜಿಸಲಿದ್ದೇವೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕಳೆದ ವಾರ ಕೋಲ್ಕತ್ತಾದಲ್ಲಿ ತಿಳಿಸಿದ್ದರು.
ಗಂಗೂಲಿಯ 4 ರಾಷ್ಟ್ರಗಳ ಸೂಪರ್ ಸಿರೀಸ್ ಫ್ಲಾಪ್ ಆಗುತ್ತೆ: ಪಾಕ್ ಮಾಜಿ ಕ್ರಿಕೆಟಿಗ
ಗಂಗೂಲಿಯವರ ನಾಲ್ಕು ದೇಶಗಳ ಸೂಪರ್ ಸಿರೀಸ್ ಫ್ಲಾಫ್ ಐಡಿಯಾ. ಇದು ಒಳ್ಳೆಯ ಯೋಜನೆಯಲ್ಲ ಎಂದು ಪಾಕಿಸ್ತಾನದ ರಶೀದ್ ಲತೀಪ್ ವಿರೋಧ ವ್ಯಕ್ತಪಡಿಸಿದ್ದಾರೆ.
ಆದರೆ ಪಾಕ್ ಮಾಜಿ ಆಟಗಾರ ಲತೀಫ್ ಗಂಗೂಲಿ ಯೋಜನೆಯನ್ನು ಟೀಕಿಸಿದ್ದು, "ಇಂಥಹ ಸರಣಿಯನ್ನು ಆಯೋಜನೆ ಮಾಡುವುದರಿಂದ ಈ ನಾಲ್ಕು ತಂಡಗಳು ಜಗತ್ತಿನ ಉಳಿದ ತಂಡಗಳನ್ನು ಮೂಲೆಗುಂಪಾಗಿಸಲಿವೆ. ಇದೊಂದು ಒಳ್ಳೆಯ ಸುದ್ದಿಯಲ್ಲ. ನನ್ನ ಪ್ರಕಾರ ಕೆಲವು ವರ್ಷಗಳ ಹಿಂದೆ ಫ್ಲಾಪ್ ಆದ ಬಿಗ್ ತ್ರೀ ಸರಣಿಯ ಹಾಗೆ ಇದು ಕೂಡ ಫ್ಲಾಪ್ ಆಗಲಿದೆ ಎಂದು ಲತೀಫ್ ಹೇಳಿದ್ದಾರೆ.
ಈ ತಿಂಗಳ ಮೊದಲ ವಾರದಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹಾಗೂ ಖಜಾಂಚಿ ಅರುಣ್ ಧುಮಾಲ್ ಲಂಡನ್ಗೆ ತೆರಳಿ ಇಸಿಬಿ ಅಧ್ಯಕ್ಷ ಕಾಲಿನ್ ಗ್ರೇವ್ಸ್ ಮುಂದಾಳತ್ವದ ಸಭೆಯಲ್ಲಿ ಚತುಷ್ಕೋನ ಸರಣಿಯ ಬಗ್ಗೆ ಚರ್ಚಿಸಿ ಬಂದಿದ್ದರು.
ಈ ಚರ್ಚೆಯ ಬಳಿಕ ಇಸಿಬಿ ಒಂದು ಪ್ರಕಟಣೆ ಹೊರಡಿಸಿದ್ದು, "ನಾವು ಬೇರೆ ಕ್ರಿಕೆಟ್ ಬೋರ್ಡ್ಗಳ ನಾಯಕರ ಜೊತೆ ಸಭೆ ನಡೆಸಿ ಕ್ರಿಕೆಟ್ನ ಮೇಲೆ ಪ್ರಭಾವ ಬೀರುವ ಅಂಶಗಳ ಬಗ್ಗೆ ಚರ್ಚೆ ನಡೆಸುತ್ತೇವೆ. ಅದೇ ರೀತಿ ಡಿಸೆಂಬರ್ನಲ್ಲಿ ಬಿಸಿಸಿಐ ಜೊತೆ ನಡೆದ ಸಭೆಯಲ್ಲಿ ನಾಲ್ಕು ರಾಷ್ಟ್ರಗಳ ಪಂದ್ಯವಾಳಿಯ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ಯೋಜನೆ ಅಭಿವೃದ್ಧಿಯಾಗಲಿದೆಯಾ ಎಂದು ಐಸಿಸಿ ಸದಸ್ಯರ ಜೊತೆ ಚರ್ಚಿಸಲು ನಾವು ಮುಕ್ತವಾಗಿ ಸಿದ್ಧರಿದ್ದೇವೆ" ಎಂದು ಇಸಿಬಿ ಗಂಗೂಲಿ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿತ್ತು.