ಹೈದರಾಬಾದ್: ಕಾಕತಾಳಿಯ ಎಂಬಂತೆ ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ, ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಮತ್ತು ಟೀಂ ಇಂಡಿಯಾದ ಹಾಲಿ ನಾಯಕ ವಿರಾಟ್ ಕೊಹ್ಲಿ ಜೂನ್ 20ರಂದೇ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು.
ಭಾರತದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಸೌರವ್ ಗಂಗೂಲಿ 1996ರ ಜೂನ್ 20ರಂದು ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಮೈದಾನದಲ್ಲಿ ಚೊಚ್ಚಲ ಟೆಸ್ಟ್ ಪಂದ್ಯ ಆಡಿದ್ದರು. ಪದಾರ್ಪಣೆ ಪಂದ್ಯದಲ್ಲೇ ಅಬ್ಬರಿಸಿದ್ದ ದಾದಾ ಶತಕ ಸಿಡಿಸಿ ಮಿಂಚಿದ್ರು.
ಈ ಬಗ್ಗೆ ಟ್ವೀಟ್ ಮಾಡಿರುವ ಗಂಗೂಲಿ, ಇದೇ ದಿನ ನಾನು ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದೆ. ಇದು ನನ್ನ ಜೀವನ ಅತ್ಯುತ್ತಮ ಕ್ಷಣವಾಗಿದೆ ಎಂದಿದ್ದಾರೆ.
'ದಿ ವಾಲ್' ಖ್ಯಾತಿಯ ಕನ್ನಡಿಗ ರಾಹುಲ್ ದ್ರಾವಿಡ್ ಕೂಡ ಇದೇ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದರು. ಇಂಗ್ಲೆಂಡ್ ಬೌಲರ್ಗಳ ಬೆವರಿಳಿಸಿದ್ದ ದ್ರಾವಿಡ್ 95 ರನ್ ಸಿಡಿಸಿದ್ರು.
ಇತ್ತ ಟೀಂ ಇಂಡಿಯಾ ಹಾಲಿ ನಾಯಕ ವಿರಾಟ್ ಕೊಹ್ಲಿ ಕೂಡ 2011ರ ಜೂನ್ 20ರಂದೇ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ವೆಸ್ಟ್ ಇಂಡೀಸ್ ವಿರುದ್ಧ ಜಮೈಕಾದ ಕಿಂಗ್ಸ್ಟನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಬಿಳಿ ಜರ್ಸಿ ತೊಟ್ಟು ಚೊಚ್ಚಲ ಪಂದ್ಯವಾಡಿದ್ದರು. ಮೊದಲ ಪಂದ್ಯದಲ್ಲಿ ಅಂತಹ ಯಶಸ್ಸು ಕಾಣದ ವಿರಾಟ್ 19 ರನ್ ಗಳಿಸಿ ಔಟ್ ಆಗಿದ್ದರು.
113 ಟೆಸ್ಟ್ ಪಂದ್ಯಗಳನ್ನಾಡಿರುವ ಸೌರವ್ ಗಂಗೂಲಿ 16 ಶತಕ ಮತ್ತು 1 ದ್ವಿಶತಕ ಸಿಡಿಸಿದ್ದು, ಒಟ್ಟು 7,212 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ 86 ಟೆಸ್ಟ್ ಪಂದ್ಯಗಳನ್ನಾಡಿದ್ದು, 27 ಶತಕ ಮತ್ತು 7 ದ್ವಿಶತಕದ ನೆರವಿನಿಂದ ಒಟ್ಟು 7,240 ರನ್ ಗಳಿಸಿದ್ದಾರೆ.