ಮುಂಬೈ:ಭಾರತ ಕಂಡ ಅಗ್ರೆಸಿವ್ ಹಾಗೂ ಶ್ರೇಷ್ಠ ನಾಯಕರ ಮೊದಲ ಸಾಲಿನಲ್ಲಿ ನಿಲ್ಲುವ ಬಂಗಾಳದ ಹುಲಿ ಸೌರವ್ ಗಂಗೂಲಿ ಬಿಸಿಸಿಐ ಚುಕ್ಕಾಣಿ ಹಿಡಿಯಲು ಸಿದ್ಧರಾಗಿದ್ದಾರೆ.
60 ವರ್ಷಗಳ ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಬಿಸಿಸಿಐ ಬಾಸ್ ಆಗುತ್ತಿರುವ ದ್ವಿತೀಯ ಕ್ರಿಕೆಟಿಗ ಎಂಬ ಶ್ರೇಯಕ್ಕೂ ಗಂಗೂಲಿ ಪಾತ್ರರಾಗಿದ್ದಾರೆ. ರಾಜಕಾರಣಿಗಳ ಆಡಳಿತಕ್ಕೆ ಒಳಪಟ್ಟಿದ್ದ ಬಿಸಿಸಿಐ ಅಧ್ಯಕ್ಷ ಸ್ಥಾನ ಗಂಗೂಲಿಗೆ ಸಿಗುತ್ತಿರುವುದು ಕೋಟ್ಯಂತರ ಅಭಿಮಾನಿಗಳಿಗೆ ಖುಷಿಯ ವಿಚಾರವಾದರೂ, ಇದರ ಹಿಂದೆಯೂ ರಾಜಕೀಯದ ಕೈವಾಡ ಇದೆ ಎಂಬ ಸುದ್ದಿ ಸದ್ಯ ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿದೆ.
ಹೌದು, ಗಂಗೂಲಿ ಭಾರತ ಕ್ರಿಕೆಟ್ ತಂಡದಲ್ಲಿ 15 ವರ್ಷ ಹಾಗೂ ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್ನಲ್ಲಿ 6 ವರ್ಷ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಕ್ರಿಕೆಟ್ ಅಭಿಮಾನಿಗಳ ಜೊತೆ ಕ್ರಿಕೆಟೇತರ ಅಭಿಮಾನಿಗಳ ಸಂಖ್ಯೆಗೂ ಏನೂ ಕಮ್ಮಿ ಇಲ್ಲ. ಇದೇ ಪಾಪುಲಾರಿಟಿಯನ್ನು ಬಿಜೆಪಿ ತನ್ನ ಪಶ್ಚಿಮ ಬಂಗಾಳದ ರಾಜಕೀಯಕ್ಕೆ ಬಳಸಿಕೊಳ್ಳಲು ಗಂಗೂಲಿಗೆ ಅಧ್ಯಕ್ಷಪಟ್ಟ ಬಿಟ್ಟುಕೊಟ್ಟಿದೆ. ಅದು ಅವಿರೋಧವಾಗಿ ಗಂಗೂಲಿ ಆಯ್ಕೆಯಾಗುತ್ತಿದ್ದಾರೆಂದರೆ ನಿಜಕ್ಕೂ ಇದರಲ್ಲಿ ರಾಜಕೀಯ ಕೈವಾಡ ಇದೆ ಎಂದೇ ಹೇಳಲಾಗ್ತಿದೆ.
ಕಳೆದ 6 ದಶಕಗಳಿಂದ ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾದ ಬಿಸಿಸಿಐ ಆಡಳಿತ ಚುಕ್ಕಾಣಿ ಕೇವಲ ರಾಜಕಾರಣಿಗಳ ಕೈವಶದಲ್ಲಿತ್ತು. ಈ ಬಾರಿಯೂ ಬಿಜೆಪಿ ಚಾಣಕ್ಯ ಅಮಿತ್ ಶಾ ಅವರ ಮಗ ಜಯ್ ಶಾ ಅಥವಾ ಕರ್ನಾಟಕದ ಬ್ರಿಜೇಶ್ ಪಟೇಲ್ ಹೆಸರು ಕೇಳಿಬಂದಿತ್ತು. ಆದರೆ ಗಂಗೂಲಿಗೆ ಹೆಚ್ಚಿನ ಬೆಂಬಲ ಇರುವುದರಿಂದ ಅವರಿಗೆ ಐಪಿಎಲ್ ಗದ್ದುಗೆ ನೀಡುವ ಮಾತುಕತೆಯೂ ನಡೆದಿತ್ತು. ಆದ್ರೆ ಗಂಗೂಲಿ ಪಟ್ಟು ಬಿಡದಿದ್ದರಿಂದ ಕೊನೆಗೂ ಅಧ್ಯಕ್ಷಗಿರಿಗೆ ಅವಿರೋಧವಾಗಿ ಅವರನ್ನು ಆಯ್ಕೆ ಮಾಡಲಾಗಿದೆ.
ಆದರೆ ಸತತ ಎರಡು ಅವಧಿಗೆ ಕ್ರಿಕೆಟ್ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದರೆ ಲೋಧ ಸಮಿತಿಯ ವರದಿ ಪ್ರಕಾರ 3 ವರ್ಷ ಯಾವುದೇ ಹುದ್ದೆಯನ್ನು ಅಲಂಕರಿಸುವಂತಿಲ್ಲ. ಆದ್ದರಿಂದ ಗಂಗೂಲಿ 2020 ಸೆಪ್ಟಂಬರ್ವರೆಗೆ ಮಾತ್ರ ಬಿಸಿಸಿಐ ಅಧ್ಯಕ್ಷರಾಗಿರಲಿದ್ದು, ನಂತರ ಗುಜರಾತ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಜಯ್ ಶಾ ಅವರಿಗೆ ಅಧಿಕಾರ ಬಿಟ್ಟುಕೊಡಲಿದ್ದಾರೆ ಎಂದು ಹೇಳಲಾಗ್ತಿದೆ.
ಆದರೆ, ಗಂಗೂಲಿಯನ್ನು ಪಶ್ಚಿಮ ಬಂಗಾಳದಲ್ಲಿ ನಡೆಯುವ 2021ರ ಚುನಾವಣೆಗೆ ಬಳಸಿಕೊಳ್ಳುವ ಆಲೋಚನೆಯನ್ನು ಬಿಜೆಪಿ ಮಾಡಿರಬಹುದು ಎನ್ನಲಾಗುತ್ತಿದೆ. ಈ ಹಿಂದೆಯೂ ಬಿಜೆಪಿ ಗಂಗೂಲಿಯನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸಿತ್ತಾದರೂ, ಕ್ರಿಕೆಟ್ ಬಿಟ್ಟುಬರದ ಗಂಗೂಲಿ ಈ ಆಫರ್ ತಿರಸ್ಕರಿಸಿದ್ದರು. ಇದೀಗ ಗಂಗೂಲಿಗೆ ವಿಶ್ವದ ಬೃಹತ್ ಕ್ರಿಕೆಟ್ ಸಂಸ್ಥೆಯ ಜವಾಬ್ದಾರಿ ನೀಡುವ ಮೂಲಕ ಮತ್ತೆ ಅವರ ಜೊತೆ ಉತ್ತಮ ಸ್ನೇಹ ಸಂಬಂಧ ವೃದ್ಧಿಸಿಕೊಂಡಿದೆ.
ಒಂದು ವೇಳೆ ಬಿಜೆಪಿಗೆ ಸೇರಲು ದಾದಾ ಒಪ್ಪಿಕೊಂಡದ್ದೇ ಆದಲ್ಲಿ ಖಂಡಿತ 2021ರ ವಿಧಾನಸಭೆಯ ಚುನಾವಣೆಗೆ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ ಎನ್ನಲಾಗುತ್ತಿದೆ.