ನವದೆಹಲಿ:ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಅಧಿಕಾರವಧಿ ಈ ತಿಂಗಳಿಗೆ ಕೊನೆಯಾಗಲಿದೆ. ಆದರೆ ಬಿಸಿಸಿಐ ಅಧ್ಯಕ್ಷರಾಗಿ ಸೌರವ್ ಗಂಗೂಲಿ ಅವರನ್ನ 2025ರವರೆಗೆ ಮುಂದುವರಿಸಬೇಕು ಎಂಬ ಬಿಸಿಸಿಐನ ಮನವಿಗೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಇಂದು ನಡೆಸಲಿದೆ.
ಸಿಜೆಐ ಎಸ್ ಎ ಬೊಬ್ಡೆ ಹಾಗೂ ಎಲ್ ನಾಗೇಶ್ವರ್ ರಾವ್ ನೇತೃತ್ವದ ದ್ವಿಸದಸ್ಯ ಪೀಠ, ಗಂಗೂಲಿ ಹಾಗೂ ಜಯ್ ಶಾ ಮುಂದುವರಿಕೆ ಕುರಿತಂತೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳಲಿದೆ.
ಗಂಗೂಲಿ ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿ 5 ವರ್ಷ ಪೂರೈಸಿದ್ದಾರೆ. ಹಾಗೂ ಜಯ್ ಶಾ ಕೂಡ ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ನಲ್ಲಿ ಜಂಟಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಿಸಿಸಿಐ ಸಂವಿಧಾನದ 6.4 ನಿಯಮದ ಪ್ರಕಾರ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ 6 ವರ್ಷಗಳ ಸೇವೆ ಸಲ್ಲಿಸಿದವರು ಮುಂದಿನ ಮೂರು ವರ್ಷಗಳ ಕಾಲ ಕ್ರಿಕೆಟ್ ಸಂಸ್ಥೆಯ ಹುದ್ದೆಯಿಂದ ದೂರ ಉಳಿಯಬೇಕಾಗಿದೆ.
ಈ ತಿಂಗಳ ಅಂತ್ಯಕ್ಕೆ ಗಂಗೂಲಿ ಕ್ರಿಕೆಟ್ ಸಂಸ್ಥೆಯ ಉನ್ನತ ಹುದ್ದೆಯಲ್ಲಿ 6 ವರ್ಷ ಪೂರೈಸಲಿದ್ದಾರೆ ಹಾಗೂ ಜಯ್ ಶಾ ಈಗಾಗಲೆ 6 ವರ್ಷಗಳನ್ನು ಪೂರೈಸಿದ್ದಾರೆ.
ಏಪ್ರಿಲ್ 21ರಂದು ಬಿಸಿಸಿಐ ಅಪೆಕ್ಸ್ ಕೋರ್ಟ್ನಲ್ಲಿ ಗಂಗೂಲಿ ಮತ್ತು ಜಯ್ ಶಾ ಅವರನ್ನು 2025ರವರೆಗೆ ಅಧಿಕಾರದಲ್ಲಿ ಮುಂದುವರಿಯುವಂತೆ ಬಿಸಿಸಿಐ ಸಂವಿಧಾನ ತಿದ್ದುಪಡಿಗೆ ಅವಕಾಶ ನೀಡಬೇಕೆಂದು ಕೋರಿ ಸುಪ್ರೀಂಕೋರ್ಟ್ಗೆ ಮನವಿ ಮಾಡಿತ್ತು.