ಕೋಲ್ಕತ್ತಾ: ಬುಧವಾರ ಎರಡನೇ ಆ್ಯಂಜಿಯೋಪ್ಲಾಸ್ಟಿಗೆ ಒಳಗಾಗಿದ್ದ ಬಿಸಿಸಿಐ ಆಧ್ಯಕ್ಷ ಸೌರವ್ ಗಂಗೂಲಿ ಸಂಪೂರ್ಣ ಚೇತರಿಸಿಕೊಂಡಿದ್ದು, ಭಾನುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಜನವರಿ ಆರಂಭದ ವಾರದಲ್ಲಷ್ಟೇ ಲಘು ಹೃದಯಾಘಾತಕ್ಕೆ ಒಳಗಾಗಿ ಆ್ಯಂಜಿಯೋಪ್ಲಾಸ್ಟಿಗೆ ಒಳಗಾಗಿದ್ದ 48 ವರ್ಷದ ಗಂಗೂಲಿ ಬುಧವಾರ ಎದೆ ನೋವು ಕಾಣಿಸಿಕೊಂಡ ಪರಿಣಾಮ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದರು.
ಗುರುವಾರ ಖ್ಯಾತ ಹೃದಯ ತಜ್ಞ ಡಾ. ದೇವಿಶೆಟ್ಟಿ ಮತ್ತು ಡಾ. ಅಶ್ವಿನ್ ಮೆಹ್ತಾ ಅವರ ನೇತೃತ್ವದಲ್ಲಿ ತಿಂಗಳಲ್ಲಿ 2ನೇ ಬಾರಿ ಗಂಗೂಲಿಗೆ ಆ್ಯಂಜಿಯೋಪ್ಲಾಸ್ಟಿಯನ್ನು ಯಶಸ್ವಿಯಾಗಿ ನಡೆಸಿ, ಮತ್ತೆ ಎರಡು ಸ್ಟೆಂಟ್ಗಳನ್ನು ಅಳವಡಿಸಲಾಗಿದೆ. ಇದೀಗ ದಾದಾ ಸಂಪೂರ್ಣ ಆರೋಗ್ಯವಾಗಿದ್ದು ಇಂದು ಮನೆಗೆ ತೆರಳಿದ್ದಾರೆ.
ಗಂಗೂಲಿಯವರ ಆರೋಗ್ಯ ಉತ್ತಮವಾಗಿದೆ. ಅವರ ಹೃದಯ ಸಾಮಾನ್ಯ ಮನುಷ್ಯನಷ್ಟೇ ಬಲಿಷ್ಠವಾಗಿದೆ ಹಾಗೂ ನಿರೀಕ್ಷಿತ ಮಟ್ಟದಲ್ಲಿ ಚೇತರಿಕೆ ಕಾಣುತ್ತಿದ್ದಾರೆ. ಮುಂದಿನ ಒಂದೆರಡು ದಿನಗಳಲ್ಲಿ ಅವರು ಸಾಮಾನ್ಯ ಜೀವನಕ್ಕೆ ಮರಳಲು ಸಾಧ್ಯವಾಗುತ್ತದೆ ಎಂದು ನಾವು ನಿರೀಕ್ಷಿಸಿದ್ದೇವೆ ಎಂದು ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ತಿಳಿಸಿದ್ದಾರೆ.