ರಾಜ್ಕೋಟ್:ಜಯದೇವ್ ಉನ್ನದ್ಕಟ್ ಅವರ ಅದ್ಭುತ ಬೌಲಿಂಗ್ ದಾಳಿಯ ನೆರವಿನಿಂದ ಸೌರಾಷ್ಟ್ರ ತಂಡ ಸೆಮಿಫೈನಲ್ನಲ್ಲಿ ಗುಜರಾತ್ ತಂಡವನ್ನು 92 ರನ್ಗಳಿಂದ ಮಣಿಸಿ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದೆ.
ರಾಜ್ಕೋಟ್ನಲ್ಲಿ ನಡೆದ ಈ ಪಂದ್ಯದಲ್ಲಿ 327 ರನ್ಗಳ ಗುರಿ ಪಡೆದಿದ್ದ ಗುಜರಾತ್ ಕೊನೆಯ ದಿನವಾದ ಬುಧವಾರ 234 ರನ್ಗಳಿಗೆ ಆಲೌಟ್ ಆಗುವ ಮೂಲಕ 92 ರನ್ಗಳ ಸೋಲು ಕಂಡಿತು.
52 ರನ್ಗಳ ಮುನ್ನಡೆ ಪಡೆದು ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ಸೌರಾಷ್ಟ್ರ ತಂಡ ಕೇವಲ 15 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸೋಲುವ ಭೀತಿಗೆ ಒಳಗಾಗಿತ್ತು. ಆದರೆ, 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದಿದ್ದ ಅರ್ಪಿತ್ ವಾಸವಾಡ ಶತಕ(139) ಹಾಗೂ ಚಿರಾಗ್ ಜನಿ(51) ಅರ್ಧಶತಕ ಸಿಡಿಸಿ 327 ರನ್ಗಳ ಸ್ಪರ್ಧಾತ್ಮಕ ಗುರಿ ನೀಡುವಲ್ಲಿ ಯಶಸ್ವಿಯಾದರು.
327 ರನ್ಗಳ ಗುರಿ ಬೆನ್ನತ್ತಿದ್ದ ಗುಜರಾತ್, ಜಯದೇವ್ ಉನಾದ್ಕಟ್ ಅವರ ದಾಳಿಗೆ ಸಿಲುಕಿ ಕೇವಲ 65 ರನ್ಗಳಾಗುವಷ್ಟರಲ್ಲೇ ಸಮಿತ್ ಗೊಹೆಲ್(5), ಪ್ರಿಯಾಂಕ್ ಪಾಂಚಾಲ್(0), ಭಾರ್ಗವ್ ಮೆರಾಯ್(14), ದೃವ ಜುರೆಲ್(5),ರಾಜು ಭಟ್(1) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತ್ತು.
ಜಯದ ನಿರೀಕ್ಷೆ ಮೂಡಿಸಿದ್ದ ಪಾರ್ಥೀವ್ ಮತ್ತು ಗಾಂಧಿ ಜೊತೆಯಾಟ
ಆದರೆ 6ನೇ ವಿಕೆಟ್ ಜೊತೆಯಾದ ನಾಯಕ ಪಾರ್ಥೀವ್ ಪಟೇಲ್(93) ಹಾಗೂ ಚಿರಾಗ್ ಗಾಂಧಿ(96) 154 ರನ್ಗಳ ಜೊತಯಾಟ ನೀಡಿ ಗುಜರಾತ್ ತಂಡದಲ್ಲಿ ಗೆಲುವಿನ ಆಸೆ ಚಿಗುರಿಸಿದ್ದರು. ಉನಾದ್ಕಟ್ 148 ಎಸೆತಗಳಲ್ಲಿ 13 ಬೌಂಡರಿ ಸಹಿತ 93 ರನ್ ಗಳಿಸಿದ್ದ ಪಾರ್ಥೀವ್ ಜೊತೆ ಆಲ್ರೌಂಡರ್ ಅಕ್ಷರ್ ಪಟೇಲ್ರನ್ನು ಸತತ ಎರಡು ಎಸೆತಗಳಲ್ಲಿ ಪೆವಿಲಿಯನ್ಗಟ್ಟುವ ಮೂಲಕ ಸೌರಾಷ್ಟ್ರಕ್ಕೆ ಮುನ್ನಡೆ ಒದಗಿಸಿಕೊಟ್ಟರು.
ಮತ್ತೆ ತಮ್ಮದೇ ಮುಂದಿನ ಓವರ್ನಲ್ಲಿ 139 ಎಸೆತಗಳಲ್ಲಿ 16 ಬೌಂಡರಿ ಸಹಿತ 96 ರನ್ ಗಳಿಸಿದ್ದ ಚಿರಾಗ್ ಗಾಂಧಿಯವರನ್ನು ಬೌಲ್ಡ್ ಮಾಡುವ ಮೂಲಕ ಸೌರಾಷ್ಟ್ರಕ್ಕೆ ಗೆಲುವು ತಂದುಕೊಟ್ಟರು. ಉಳಿದಂತೆ ಬಾಲಂಗೋಚಿಗಳಾದ ರೂಸ್ ಕಲಾರಿಯಾ(1), ನಾಗ್ವಸ್ವಲ್ಲ 4 ರನ್ ಗಳಿಸಿ ಔಟಾದರು. ಗುಜರಾತ್ 72.2 ಓವರ್ಗಳಲ್ಲಿ 234 ರನ್ಗಳಿಗೆ ಆಲೌಟ್ ಆಗುವ ಮೂಲಕ 92 ರನ್ಗಳ ಸೋಲು ಕಂಡಿತು.
ಸೌರಾಷ್ಟ್ರದ ತಂಡದ ಪರ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಜಯದೇವ್ ಉನಾದ್ಕಟ್ 56 ರನ್ ನೀಡಿ 7 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು. ಧರ್ಮೇಂದ್ರ ಸಿನ್ಹಾ ಜಡೇಜಾ, ಚಿರಾಗ್ ಜನಿ ಹಾಗೂ ಪ್ರೇರಕ್ ಮಂಕಂಡ್ ತಲಾ ಒಂದು ವಿಕೆಟ್ ಪಡೆದರು.
ಆಕರ್ಷಕ ಶತಕ ಸಿಡಿಸಿ ಸ್ಪರ್ಧಾತ್ಮಕ ಗುರಿ ನೀಡಲು ನೆರವಾದ ಅರ್ಪಿತ್ ವಾಸವಾಡ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಮಾರ್ಚ್ 13ರಂದು ನಡೆಯಲಿರುವ ರಣಜಿ ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ತಂಡ ಪಶ್ಚಿಮ ಬಂಗಾಳ ತಂಡವನ್ನು ಎದುರಿಸಲಿದೆ.